×
Ad

ರಕ್ಷಣಾ ಸಚಿವರ ಸ್ಥಾನಕ್ಕೆ ಪರಿಕ್ಕರ್ ನೇಮಕ ಅನುಚಿತ: ಕಾಂಗ್ರೆಸ್ ಟೀಕೆ

Update: 2017-01-27 20:48 IST

 ಪಣಜಿ, ಜ.27: ರಕ್ಷಣಾ ಸಚಿವರ ಹುದ್ದೆ ಅತ್ಯಂತ ಜವಾಬ್ದಾರಿಯುತವಾದುದು. ಆದರೆ ಪ್ರಸ್ತುತ ರಕ್ಷಣಾ ಸಚಿವರಾಗಿರುವ ಮನೋಹರ್ ಪರಿಕ್ಕರ್‌ಗೆ ಈ ದ್ದೆಯಲ್ಲಿ ಆಸಕ್ತಿಯಿಲ್ಲ. ದೇಶದ ಇತಿಹಾಸದಲ್ಲಿ ಇದುವರೆಗೆ ಹುದ್ದೆಯ ಬಗ್ಗೆ ಆಸಕ್ತಿ ಇರದ ರಕ್ಷಣಾ ಸಚಿವರನ್ನು ಕಂಡಿಲ್ಲ. ಇದು ಸರಕಾರದ ಉನ್ನತ ಹುದ್ದೆಗಳಲ್ಲಿ ಒಂದು. ಇಂತಹ ಸೂಕ್ಷ್ಮ ಮತ್ತು ಮಹತ್ತರ ಹುದ್ದೆಗೆ ಇಂತವರ ನೇಮಕ ಅನುಚಿತ ಕ್ರಮವಾಗಿದೆ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಟೀಕಿಸಿದ್ದಾರೆ.

   ಗೋವಾದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ರಕ್ಷಣಾ ಸಚಿವರ ಸ್ಥಾನಮಾನಕ್ಕೆ ತಕ್ಕಂತೆ ಪರಿಕ್ಕರ್ ನಡೆದುಕೊಳ್ಳುತ್ತಿಲ್ಲ. ರಕ್ಷಣಾ ಸಚಿವರಾಗಿ ಅವರ ಕಾರ್ಯನಿರ್ವಹಣೆ ಪ್ರಶ್ನಾರ್ಥಕವಾಗಿದೆ ಎಂದು ಪೈಲಟ್ ದೂರಿದರು.

   ಸಮಾಣಶ್ರೇಣಿ, ಸಮಾನ ಪಿಂಚಣಿ ವಿಷಯದಲ್ಲಿ ಬಿಜೆಪಿ ಜನತೆಯನ್ನು ಮೂರ್ಖರನ್ನಾಗಿಸುತ್ತಿದೆ ಎಂದ ಅವರು, ಮಾಜಿ ಸೈನಿಕರ ಬೇಡಿಕೆ ಈಡೇರಿದ್ದರೆ ಅವರು ಈಗಲೂ ದಿಲ್ಲಿಯ ಜಂತರ್ ಮಂತರ್ ಎದುರು ಪ್ರತಿಭಟನೆ ನಡೆಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಸೇನೆಯ ಯೋಧರಿಗೆ ವಿಶ್ವಾಸದ್ರೋಹ ಎಸಗಲಾಗುತ್ತಿದೆ. ಹಲವಾರು ಮಾಜಿ ಯೋಧರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಎರಡೂವರೆ ವರ್ಷದ ಬಳಿಕವೂ ಅವರಿಗೆ ಕೆಲವು ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿ ಸತಾಯಿಸಲಾಗುತ್ತಿದೆ. ಇದು ಮಾಜಿ ಯೋಧರ ಬೇಡಿಕೆಗೆ ವಿರುದ್ಧವಾಗಿದೆ. ಯೋಧರ ಬೇಡಿಕೆ ಈಡೇರಿಸಲಾಗಿದೆ ಎಂಬ ಭ್ರಮೆಯನ್ನು ಬಿತ್ತಲಾಗುತ್ತಿದೆ ಮತ್ತು ಪರಿಕ್ಕರ್ ಕೂಡಾ ಇದರಲ್ಲಿ ಸೇರಿದ್ದಾರೆ ಎಂದು ಟೀಕಿಸಿದರು.

 ಗೋವಾದ ಮುಂದಿನ ಮುಖ್ಯಮಂತ್ರಿಯನ್ನು ಕೇಂದ್ರ ಸರಕಾರದಿಂದ ಕಳಿಸುವ ಸಾಧ್ಯತೆಯಿದೆ ಎಂಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆಯನ್ನು ಪ್ರಸ್ತಾವಿಸಿದ ಪೈಲಟ್, ಈಗ ಸೂಪರ್ ಸಿಎಂ, ಸೂಪರ್ ಸೂಪರ್ ಸಿಎಂಗಳ ಬಗ್ಗೆ ಮಾತಾಡಲಾಗುತ್ತಿದೆ. ಗಡ್ಕರಿ ಬಂದು ಈ ವಿಷಯಕ್ಕೆ ಹೊಸ ತಿರುವು ನೀಡಿದ್ದಾರೆ ಎಂದರು. ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ಅಧಿಕಾರ ಪಡೆಯಲು ಬಿಜೆಪಿ ಹಣದ ಪ್ರಭಾವವನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News