ವಲಸಿಗರಿಗೆ ನಿರ್ಬಂಧ ವಿಧಿಸುವ ಟ್ರಂಪ್ ಆದೇಶಕ್ಕೆ ಫೇಸ್ ಬುಕ್ ನ ಝುಕರ್ಬರ್ಗ್‌ ನೀಡಿದ್ದಾರೆ ಅತ್ಯುತ್ತಮ ತಿರುಗೇಟು

Update: 2017-01-28 06:38 GMT

ವಾಷಿಂಗ್ಟನ್, ಜ.28: ವಲಸಿಗರಿಗೆ ಅಮೆರಿಕ ಪ್ರವೇಶಾತಿ ಕುರಿತು ನಿರ್ಬಂಧ ವಿಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ತಮ್ಮ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಝುಕರ್ಬರ್ಗ್ ಇಂದು ಹೀಗೆಂದು ಬರೆದಿದ್ದಾರೆ. ‘‘ನನ್ನ ಮುತ್ತಜ್ಜ ಮತ್ತು ಮುತ್ತಜ್ಜಿ ಜರ್ಮನಿ, ಆಸ್ಟ್ರೇಲಿಯಾ ಮತ್ತು ಪೋಲೆಂಡ್ ನಿಂದ ಬಂದವರು. ಪ್ರೆಸಿಲ್ಲಾ ಹೆತ್ತವರು ಚೀನಾ ಮತ್ತು ವಿಯೆಟ್ನಾಂ ವಲಸಿಗರಾಗಿದ್ದರು. ಅಮೆರಿಕ ವಲಸಿಗರ ದೇಶವಾಗಿದೆ. ಈ ಬಗ್ಗೆ ನಾವು ಹೆಮ್ಮೆಪಡಬೇಕು. ಅಧ್ಯಕ್ಷ ಟ್ರಂಪ್ ಸಹಿ ಮಾಡಿರುವ ಆದೇಶದ ಬಗ್ಗೆ ನಿಮ್ಮಂತೆಯೇ ನನಗೂ ಕಳವಳವುಂಟಾಗಿದೆ. ನಾವು ಈ ದೇಶವನ್ನು ಸುರಕ್ಷಿತವಾಗಿಡಬೇಕು. ಅದಕ್ಕಾಗಿ ಈ ದೇಶಕ್ಕೆ ಅಪಾಯವೊಡ್ಡುವವರತ್ತ ನಮ್ಮ ಗಮನ ಕೇಂದ್ರೀಕರಿಸಬೇಕು. ನಿಜವಾಗಿಯೂ ಯಾವುದೇ ಅಪಾಯವೊಡ್ಡದ ಜನರತ್ತ ಕಾನೂನು ಗಮನಹರಿಸುವುದರಿಂದ ಎಲ್ಲಾ ಅಮೆರಿಕನ್ನರೂ ಅಭದ್ರತೆಯ ಭಾವನೆಯಿಂದ ನರಳುವಂತೆ ಮಾಡುತ್ತದೆ. ನಿರಾಶ್ರಿತರಿಗೆ ಹಾಗೂ ಸಹಾಯ ಬೇಕಿದ್ದವರಿಗೆ ನಮ್ಮ ಬಾಗಿಲನ್ನು ನಾವು ತೆರೆದಿಡಬೇಕು. ನಾವು ನಿರಾಶ್ರಿತರನ್ನು ದೇಶ ಪ್ರವೇಶಿಸದಂತೆ ಎರಡು ದಶಕಗಳ ಹಿಂದೆ ತಡೆದಿದ್ದರೆ, ಪ್ರೆಸಿಲ್ಲಾಳ ಹೆತ್ತವರು ಇಂದು ಇಲ್ಲಿರುತ್ತಿರಲಿಲ್ಲ.

ಈ ದೇಶಕ್ಕೆ ತಮ್ಮ ಹೆತ್ತವರಿಂದ ಸಣ್ಣ ಪ್ರಾಯದಲ್ಲೇ ಕರೆತರಲ್ಪಟ್ಟ ವಲಸಿಗರಿಗಾಗಿ ಏನಾದರೂ ಮಾಡುವುದಾಗಿ ಅಧ್ಯಕ್ಷ ಟ್ರಂಪ್ ಹೇಳಿರುವುದು ನನಗೆ ಸಂತಸ ತಂದಿದೆ. ದೇಶಕ್ಕೆ ಬರುತ್ತಿರುವ ಮಹಾನ್ ಪ್ರತಿಭೆಗಳಿಂದ ದೇಶ ಪ್ರಯೋಜನ ಪಡೆಯುವುದನ್ನು ಮುಂದುವರಿಸಬೇಕೆಂದು ಅಧ್ಯಕ್ಷರು ಹೇಳಿರುವುದೂ ನನಗೆ ಸಂತಸ ತಂದಿದೆ.

ಕೆಲ ವರ್ಷಗಳ ಹಿಂದೆ ಸ್ಥಳೀಯ ಮಿಡ್ಲ್ ಸ್ಕೂಲ್ ಒಂದರಲ್ಲಿ ತರಗತಿ ತೆಗೆದುಕೊಂಡಾಗ ನನ್ನ ಬೆಸ್ಟ್ ವಿದ್ಯಾರ್ಥಿಗಳಲ್ಲಿ ದಾಖಲೆಗಳಿರಲಿಲ್ಲ. ಅವರು ನಮ್ಮ ಭವಿಷ್ಯ ಕೂಡ. ನಾವು ವಲಸಿಗರ ಒಂದು ದೇಶ. ಇಲ್ಲಿರುವ ನಮ್ಮ ಸುತ್ತಲಿನ ಜಗತ್ತಿನ ಶ್ರೇಷ್ಠರಿಂದ ನಾವು ಪ್ರಯೋಜನ ಪಡೆಯತ್ತಿದ್ದೇವೆ. ಜನರನ್ನು ಒಂದುಗೂಡಿಸಲು ನಮಗೆ ಧೈರ್ಯ ಹಾಗೂ ಸ್ಥೈರ್ಯವಿದೆ ಹಾಗೂ ಈ ವಿಶ್ವವನ್ನು ಇನ್ನೂ ಉತ್ತಮ ಸ್ಥಳವನ್ನಾಗಿಸಬಹುದು ಎಂಬ ನಂಬಿಕೆ ನನಗಿದೆ.’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News