ವ್ಯಕ್ತಿಯ ಬಾಯಿ ಮೂಲಕ ಹೊರ ಬಂತು ಆರು ಅಡಿ ಉದ್ದದ ಲಾಡಿಹುಳು!
ವ್ಯಕ್ತಿಯ ಬಾಯಿ ಮೂಲಕ ಹೊರ ಬಂತು ಆರು ಅಡಿ ಉದ್ದದ ಲಾಡಿ ಹುಳು !
ಹೊಸದಿಲ್ಲಿ, ಜ.28: ಆರು ಅಡಿಗಿಂತಲೂ ಹೆಚ್ಚು ಉದ್ದದ ಲಾಡಿ ಹುಳುವೊಂದನ್ನು ಹೊಸದಿಲ್ಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಎಂಡ್ ಬೈಲಿಯರಿ ಸಾಯನ್ಸಸ್ ಇಲ್ಲಿನ ವೈದ್ಯರು ರೋಗಿಯೊಬ್ಬನ ಬಾಯಿಯಿಂದ ಹೊರ ತೆಗೆದಿದ್ದಾರೆಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪ್ರಕಟಿಸಿದ ವರದಿಯೊಂದು ತಿಳಿಸಿದೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ 48 ವರ್ಷದ ವ್ಯಕ್ತಿಯೊಬ್ಬನಿಗೆ ವೈದ್ಯರು 2014ರಲ್ಲಿ ಕೊಲೊನೊಸ್ಕೊಪಿ ನಡೆಸಿದ್ದರು. ಆತನ ವೈದ್ಯಕೀಯ ವರದಿಗಳು ಆತನ ರಕ್ತದಲ್ಲಿ ಹಿಮೊಗ್ಲೋಬಿನ್ ಕಡಿಮೆ ಇರುವುದನ್ನು ಪತ್ತೆ ಹಚ್ಚಿದ್ದವು. ಡಾ.ಸಿರಿಯಾಕ್ ಫಿಲಿಪ್ಸ್ ಎಂಬ ವೈದ್ಯರು ಕೊಲೊನೊಸ್ಕೊಪಿ ನಡೆಸುತ್ತಿದ್ದಾಗ ಹೊಟ್ಟೆಯಲ್ಲಿ ಹುಳವಿರುವುದನ್ನು ಪತ್ತೆ ಹಚ್ಚಿದ್ದರು. ಕೂಡಲೇ ವೈದ್ಯರು ಎಂಡೊಸ್ಕೊಪಿ ಪ್ರಕ್ರಿಯೆ ನಡೆಸಿದ್ದರು. ಇದರಲ್ಲಿ ಕ್ಯಾಮರಾ ಮೂಲಕ ವೈದ್ಯರು ವ್ಯಕ್ತಿಯ ಕರುಳನ್ನು ವೀಕ್ಷಿಸಿದಾಗ ಸಣ್ಣ ಕರುಳಿನಲ್ಲಿ ಉದ್ದದ ಹುಳುವಿರುವುದು ತಿಳಿದು ಬಂದಿತ್ತು.
ನಂತರ ವ್ಯಕ್ತಿಗೆ ಅನಸ್ತೇಶಿಯಾ ನೀಡಿ ಸಂಸ್ಥೆಯ ವೈದ್ಯರ ತಂಡವು ಆತನ ಬಾಯಿಯ ಮುಖಾಂತರ ನಾಲ್ಕು ಅಡಿಗೂ ಹೆಚ್ಚಿನ ಉದ್ದದ ಲಾಡಿಹುಳುವನ್ನು ಫೊರ್ಸೆಪ್ಸ್ ಸಹಾಯದಿಂದ ಹೊರಗೆಳೆದರು. ಈ ಪ್ರಕ್ರಿಯೆಗೆ ಒಂದು ಗಂಟೆ 15 ನಿಮಿಷ ತಗುಲಿತ್ತು. ಹುಳದ ಉದ್ದವನ್ನು ಪರೀಕ್ಷಿಸಿದಾಗ ಅದು 6.1 ಅಡಿಯಿರುವುದು ತಿಳಿದು ಬಂದಿತ್ತು. ಇಷ್ಟು ಉದ್ದದ ಲಾಡಿ ಹುಳುವನ್ನು ತಾನು ನೋಡಿಯೇ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಹುಳುವನ್ನು ವೈದ್ಯರು ತಾಯಿನಿಯಾ ಸೊಲಿಯಂ ಅಥವಾ ಪೋರ್ಕ್ ಟೇಪ್ ವರ್ಮ್ ಎಂದು ಗುರುತಿಸಿದ್ದಾರೆ.
ನಂತರ ರೋಗಿಗೆ ಹುಳುಗಳನ್ನು ನಾಶಪಡಿಸುವ ಔಷಧಿ ನೀಡಲಾಯಿತಲ್ಲದೆ, ಆತ ಹಾಗೂ ಆತನ ಕುಟುಂಬ ಮುಂದಿನ ಆರು ತಿಂಗಳುಗಳ ಕಾಲ ನಿಯಮಿತವಾಗಿ ಹುಳು ನಿರೋಧಕ ಔಷಧಿ ಸೇವಿಸುವಂತೆ ಸಲಹೆ ನೀಡಲಾಯಿತು. ಅಷ್ಟೇ ಅಲ್ಲದೆ ಹಂದಿ ಮಾಂಸವನ್ನು ತಿನ್ನುವವರಾಗಿದ್ದರೆ ಚೆನ್ನಾಗಿ ಬೇಯಿಸಿ ತಿನ್ನುವಂತೆ ಹಾಗೂ ಕೊಳಕು ಪ್ರದೇಶಗಳಿಂದ ದೂರವುಳಿಯುವಂತೆಯೂ ಸಲಹೆ ನೀಡಲಾಗಿದೆ.
ಲಾಡಿಹುಳುವಿನ ತತ್ತಿ ಆಹಾರ ರೂಪದಲ್ಲಿ ಹೊಟ್ಟೆ ಸೇರಿದರೆ ಇಂತಹ ಸಮಸ್ಯೆಯುಂಟಾಗುತ್ತದೆ ಹಾಗೂ ಅದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಸಿಸ್ಟಿಸೆರ್ಸೋಸ್ ಎನ್ನಲಾಗುತ್ತದೆ. ಮಲಿನ ನೀರು, ಆಹಾರ ಅಥವಾ ಮಲದಿಂದ ಈ ಸಮಸ್ಯೆಯುಂಟಾಗುತ್ತದೆ.
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಶನ್ ಪ್ರಕಾರ, ವಯಸ್ಕ ಹುಳುವೊಂದು ಸಾಧಾರಣವಾಗಿ 2 ಮೀಟರಿನಿಂದ 7 ಮೀಟರ್ ಉದ್ದವಿರುತ್ತದೆ. ಕೆಲವೊಮ್ಮೆ ಎಂಟು ಮೀಟರಿಗೂ ಹೆಚ್ಚು ಉದ್ದದ ಹುಳಗಳು ಪತ್ತೆಯಾಗಿದ್ದೂ ಉಂಟು ಎಂದು ಸಂಸ್ಥೆ ಹೇಳಿಕೊಂಡಿದೆ.