28ನೆ ಬಾರಿ ಮದುವೆಯಾದ ಭೂಪ 25ನೆ ಪತ್ನಿಯಿಂದಾಗಿ ಜೈಲು ಸೇರಿದ!
ಢಾಕಾ, ಜ.28: ಬರೋಬ್ಬರಿ 28 ಬಾರಿ ರಹಸ್ಯವಾಗಿ ವಿವಾಹವಾಗಿದ್ದಾನೆನ್ನಲಾದ 45 ವರ್ಷದ ಬಾಂಗ್ಲಾದೇಶದ ಪ್ರಜೆಯೊಬ್ಬನನ್ನು ಆತನ 25ನೆ ಪತ್ನಿ ನೀಡಿದ ದೂರಿನನ್ವಯ ವರದಕ್ಷಿಣೆ ಹಿಂಸೆ ಆರೋಪದ ಮೇಲೆ ಬಂಧಿಸಲಾಗಿದೆ.
ಆರೋಪಿ ಯಾಸಿನ್ ಬ್ಯಾಪರಿಯನ್ನು ಬರ್ಗುನ ಜಿಲ್ಲೆಯ ತಲ್ತಲಿಯಲ್ಲಿರುವ ಆತನ 27ನೆ ಪತ್ನಿಯ ಮನೆಯಿಂದ ಬಂಧಿಸಲಾಗಿದೆ. ಆತನ 25ನೆ ಪತ್ನಿಶಿಯುಲಿ ಅಖ್ತರ್ ತನಿಯಾ ದೂರುದಾರೆಯಾಗಿದ್ದಾಳೆ. ತನಿಯಾಳ ಪ್ರಕಾರ ಆಕೆ ಯಾಸಿನ್ ನನ್ನು 2011ರಲ್ಲಿ ಆತನಿಂದ ಪುತ್ರಿಯೊಬ್ಬಳು ಹುಟ್ಟಿದ ನಂತರ ಮದುವೆಯಾಗಿದ್ದಳು. ಮದುವೆಯ ನಂತರವಷ್ಟೇ ತಾನು ಆತನ ಏಕೈಕ ಪತ್ನಿಯಲ್ಲ, ಬದಲಾಗಿ ಆತನ 25ನೆ ಪತ್ನಿಯೆಂದು ಆಕೆಗೆ ತಿಳಿದು ಬಂದಿತ್ತು. ನಂತರ ಆಕೆ ತನ್ನ ಪತಿಯ 17 ಮಂದಿ ಇತರ ಪತ್ನಿಯರ ಹೆಸರು ಮತ್ತು ವಿಳಾಸಗಳನ್ನು ಪತ್ತೆ ಹಚ್ಚಲು ಸಫಲಳಾಗಿದ್ದಳು. ಆಕೆ ಹೇಳುವಂತೆ ಯಾಸಿನ್ ಗೆ ಎರಡನೆ ಪತ್ನಿಯಿಂದ ಇಬ್ಬರು ಪುತ್ರಿಯರಿದ್ದರೆ, ಮೂರನೆ ಪತ್ನಿಯಿಂದ ಹಾಗೂ ಏಳನೆ ಪತ್ನಿಯಿಂದ ಒಬ್ಬ ಪುತ್ರ ಹಾಗೂ 24ನೆ ಪತ್ನಿಯಿಂದ ಒಬ್ಬಳು ಮಗಳಿದ್ದಾಳೆ.
ಮನೆಯಿಂದ ಕೆಲಸದ ನಿಮಿತ್ತ ಹೊರಗಿರಬೇಕಾಗಿದೆ ಎಂದು ತನಿಯಾಗೆ ಸಬೂಬು ಹೇಳುತ್ತಿದ್ದ ಯಾಸಿನ್ ವರದಕ್ಷಿಣೆ ತರುವಂತೆ ಆಕೆಗೆ ದೈಹಿಕ ಹಿಂಸೆ ನೀಡುತ್ತಿದ್ದನೆನ್ನಲಾಗಿದೆ. ತನಗೆ ತಿಳಿಯದೆಯೇ ಆತ ಮಟಿಭಂಗ ಪ್ರದೇಶದ ಯುವತಿಯೊಬ್ಬಳನ್ನು ವಿವಾಹವಾದರೂ ಆಕೆಗೆ ಆತನ ಕರ್ಮಕಾಂಡಗಳು ತಿಳಿಯುತ್ತಿದ್ದಂತೆಯೇ ವಿಚ್ಛೇದನ ಪಡೆದಿದ್ದಳು. ನಂತರ ಚಿತ್ತಗಾಂಗ್ ಮೂಲದ ಯುವತಿಯನ್ನು 2015ರಲ್ಲಿ ವಿವಾಹವಾದ ಆತ ಮುಂದೆ ಖುಲ್ನಾ ಪ್ರದೇಶದ ಗಾರ್ಮೆಂಟ್ ಉದ್ಯೋಗಿಯೊಬ್ಬಳನ್ನು ವಿವಾಹವಾಗಿದ್ದಾನೆ.
ತಾನಿಯಾ ನೀಡಿದ ಹೆಸರು ವಿಳಾಸಗಳನ್ನು ಇನ್ನೂ ಪೊಲೀಸರು ದೃಢಪಡಿಸಿಲ್ಲ. ಆತ 28 ಬಾರಿ ವಿವಾಹವಾಗಿದ್ದಾನೆಂದು ಆಕೆ ಹೇಳಿದ್ದರೂ ತನಿಖೆಯ ವೇಳೆ ಆತ ತಾನು ಕೇವಲ ಎರಡು ವಿವಾಹವಾಗಿದ್ದಾಗಿ ಹೇಳಿಕೊಂಡಿದ್ದಾನೆ.