ನಾಪತ್ತೆಯಾಗಿದ್ದ ಬಾರ್ಕ್ ವಿಜ್ಞಾನಿ ಮನೆಗೆ ವಾಪಸ್

Update: 2017-01-28 15:06 GMT

ಮುಂಬೈ,ಜ.28: ತನ್ನ ಹಿರಿಯ ಅಧಿಕಾರಿಗಳಿಂದ ಕಿರುಕುಳವನ್ನು ಆರೋಪಿಸಿ ಮನೆಯಿಂದ ನಾಪತ್ತೆಯಾಗಿದ್ದ ಇಲ್ಲಿಯ ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರ (ಬಾರ್ಕ್)ದ ಕಿರಿಯ ವಿಜ್ಞಾನಿ ಬಬಿತಾ ಸಿಂಗ್(30) ಅವರು ಪುದುಚೇರಿಯಲ್ಲಿ ಪತ್ತೆಯಾಗಿದ್ದು, ಶುಕ್ರವಾರ ನವಿಮುಂಬೈನ ತನ್ನ ಮನೆಗೆ ವಾಪಸಾಗಿದ್ದಾರೆ.

ಬಬಿತಾ ಜ.23ರಿಂದ ನೆರುಲ್‌ನಲ್ಲಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾಗುವ ಮುನ್ನ ಅವರು ತನ್ನ ಹಿರಿಯ ಅಧಿಕಾರಿಗಳು ತನಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಸೋದರ ಮತ್ತು ಸಹೋದ್ಯೋಗಿಗಳಿಗೆ ಮೇಲ್ ಕಳುಹಿಸಿದ್ದರು. ‘ಪ್ರತಿದಿನವೂ ಸಾಯುವುದಕ್ಕಿಂತ ಒಂದೇ ಬಾರಿಗೆ ಸಾಯಲು ಬಯಸಿದ್ದೇನೆ ’ ಎಂದಾಕೆ ತಿಳಿಸಿದ್ದರು.

ತನ್ನ ಮೊಬೈಲ್ ಫೋನ್‌ನ್ನು ಬಬಿತಾ ಮನೆಯಲ್ಲಿಯೇ ಬಿಟ್ಟಿದ್ದರು. ನಾಪತ್ತೆಯ ಬಗ್ಗೆ ಕುಟುಂಬವು ನೆರುಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ಆದರೆ ಮಾಧ್ಯಮಗಳಲ್ಲಿ ತನ್ನ ನಾಪತ್ತೆಯ ಬಗ್ಗೆ ವರದಿಗಳನ್ನು ಓದಿದ ನಂತರ ಕುಟುಂಬವನ್ನು ಸಂಪರ್ಕಿಸಲು ನಿರ್ಧರಿಸಿದ್ದ ಅವರು ಜ.26ರಂದು ಸೋದರನಿಗೆ ಕರೆ ಮಾಡಿ ತಾನು ಪುದುಚೇರಿಯ ಆಶ್ರಮವೊಂದರಲ್ಲಿ ಇರುವುದಾಗಿ ತಿಳಿಸಿದ್ದರು. ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಈ ಹೆಜ್ಜೆಯಿಟ್ಟಿದ್ದಾಗಿ ಅಳಲು ತೋಡಿಕೊಂಡಿದ್ದರು.

ತನ್ನ ಮೇಲಧಿಕಾರಿಗಳ ಕಿರುಕುಳದ ವಿರುದ್ಧ ಪೊಲೀಸ್ ದೂರು ನೀಡುವುದು ಅವರಿಗೆ ಬಿಟ್ಟ ವಿಷಯವಾಗಿದೆ. ದೂರು ನೀಡದಿದ್ದರೆ ಅದು ಬಾರ್ಕ್‌ನ ಆಂತರಿಕ ಆಡಳಿತಾತ್ಮಕ ವಿಷಯವಾಗುತ್ತದೆ ಎಂದು ಡಿಸಿಪಿ ಪ್ರಕಾಶ ಖೈರೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News