ಸಿಂಧು ಫೈನಲ್‌ಗೆ, ಶ್ರೀಕಾಂತ್‌ಗೆ ಶಾಕ್
ಲಕ್ನೋ, ಜ.28: ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಜಿಪಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕೆ. ಶ್ರೀಕಾಂತ್ ಆಘಾತಕಾರಿ ಸೋಲನುಭವಿಸಿದರೆ, ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ 9ನೆ ಶ್ರೇಯಾಂಕದ ಸಾಯ್ ಪ್ರಣೀತ್ ಅವರು 3ನೆ ಶ್ರೇಯಾಂಕದ ಶ್ರೀಕಾಂತ್‌ರನ್ನು 15-21, 21-10, 21-17 ಗೇಮ್‌ಗಳ ಅಂತರದಿಂದ ಸೋಲಿಸಿ ಟೂರ್ನಿಯಿಂದ ಹೊರ ನಡೆಯುವಂತೆ ಮಾಡಿದರು.
ಮಹಿಳೆಯರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಸಿಂಧು ಅವರು ಇಂಡೋನೇಷ್ಯಾದ ನಾಲ್ಕನೆ ಶ್ರೇಯಾಂಕಿತೆ ಫಿತ್ರಿಯಾನಿ ಫಿತ್ರಿಯಾನಿ ಅವರನ್ನು 21-11, 21-19 ಗೇಮ್‌ಗಳ ಅಂತರದಿಂದ ಮಣಿಸಿದರು.
21ರ ಹರೆಯದ ಹೈದರಾಬಾದ್ ಆಟಗಾರ್ತಿ ಸಿಂಧು ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯಾದ ಗ್ರಿಗೊರಿಯಾ ಮರಿಸ್ಕಾರನ್ನು ಎದುರಿಸಲಿದ್ದಾರೆ. 17ರ ಪ್ರಾಯದ ಮರಿಸ್ಕಾ ತಮ್ಮದೇ ದೇಶದ ಹನ್ನಾ ರಾಮದಿನಿ ಅವರನ್ನು 21-19, 21-14 ಸೆಟ್‌ಗಳ ಅಂತರದಿಂದ ಮಣಿಸಿದರು.