ಏಕತೆ ದೇಶದ ಮೂಲಾಧಾರ: ಪ್ರಧಾನಿ ಮೋದಿ
ಹೊಸದಿಲ್ಲಿ, ಜ.28: ಏಕತೆ ದೇಶದ ಮೂಲಾಧಾರವಾಗಿದೆ. ಎನ್‌ಸಿಸಿ ಕೆಡೆಟ್‌ಗಳ ಬದುಕು ಸಮವಸ್ತ್ರ, ಕವಾಯತು ಮತ್ತು ಶಿಬಿರಕ್ಕಿಂತ ಅತೀತವಾಗಿದ್ದು ಇದು ಉದ್ದಿಷ್ಟ ಕಾರ್ಯದ ವಿವೇಚನೆಯನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲಿ ನಡೆದ ಎನ್‌ಸಿಸಿ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಎನ್‌ಸಿಸಿಯ ಅನುಭವ ದೇಶದ ಶಕ್ತಿ ಮತ್ತು ವೈವಿಧ್ಯದ ಕುರಿತ ಮಿನುಗುನೋಟದ ದರ್ಶನ ನೀಡುತ್ತದೆ . ಎನ್‌ಸಿಸಿ ಕೆಡೆಟ್‌ಗಳು ದೇಶದ ಭವಿಷ್ಯದ ಕುರಿತು ಆಶಾವಾದ ಮತ್ತು ದೇಶದ ಯುವಜನರಲ್ಲಿರುವ ಶಕ್ತಿಯ ಬಗ್ಗೆ ಹೆಮ್ಮೆ ಮೂಡಿಸುತ್ತಿದ್ದಾರೆ ಎಂದು ಮೋದಿ ಹೇಳಿದರು. ನೂರಕ್ಕೂ ಹೆಚ್ಚು ಭಾಷೆ, 1,500ರಷ್ಟು ಆಡುಭಾಷೆ, ವಿವಿಧ ಸಂಸ್ಕೃತಿ, ಸಂಪ್ರದಾಯ, ವೈವಿಧ್ಯಮಯ ಆಹಾರ ಸಂಸ್ಕೃತಿ - ಇಷ್ಟೆಲ್ಲ ಇದ್ದರೂ ಭಾರತವು ಐಕ್ಯತೆಯಿಂದಿರುವ ಬಗ್ಗೆ ವಿಶ್ವವೇ ಆಶ್ಚರ್ಯಚಕಿತವಾಗಿದೆ. ಇದೇ ನಮ್ಮ ದೇಶದ ಶಕ್ತಿಯಾಗಿದೆ. ಪ್ರಜೆಗಳು, ಯುವಜನತೆ, ಪಂಡಿತರು, ವಿಜ್ಞಾನಿಗಳು, ಶ್ರಮಜೀವಿಗಳು, ರೈತರು, ಸಂತರು- ಇವರೇ ದೇಶವನ್ನು ನಿರ್ಮಿಸುವವರು. ಚಕ್ರವರ್ತಿಗಳು, ರಾಜರು, ಸರಕಾರ ಇವರಲ್ಲ ಎಂದ ಮೋದಿ, ಭೀಮ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ನಗದುರಹಿತ ಆರ್ಥಿಕ ವ್ಯವಸ್ಥೆಗೆ ಸಹಕರಿಸುವಂತೆ ಯುವಜನರಿಗೆ ಕರೆ ನೀಡಿದರು. ಡಿಜಿಟಲ್ ವ್ಯವಹಾರದ ಮೂಲಕ ನೋಟುಗಳ ಮುದ್ರಣ, ಸಾಗಾಟ , ಎಟಿಎಂ ವ್ಯವಹಾರ ಮುಂತಾದ ವೆಚ್ಚಗಳಲ್ಲಿ ಉಳಿತಾಯವಾಗಲಿದ್ದು ಈ ಹಣವನ್ನು ಬಡಜನರ ಶ್ರೇಯೋಭಿವೃದ್ಧಿಗೆ ಉಪಯೋಗಿಸಬಹುದು . ಈ ಬಗ್ಗೆ ಎನ್‌ಸಿಸಿ ಕ್ಯಾಡೆಟ್‌ಗಳು ತಮ್ಮ ನೆರೆಹೊರೆಯ ಜನರಿಗೆ ಮಾಹಿತಿ ನೀಡಬೇಕು. ಸ್ವಚ್ಛಭಾರತ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮೋದಿ ಕರೆ ನೀಡಿದರು.