ಉತ್ತರಪ್ರದೇಶ: ಬಿಜೆಪಿ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಹಿಂದೂ ಯುವ ವಾಹಿನಿ
ಗೋರಖ್‌ಪುರ, ಜ.28: ಗೋರಖ್‌ಪುರ ಕ್ಷೇತ್ರದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು ಸ್ಥಾಪಿಸಿರುವ ಹಿಂದೂ ಯುವ ವಾಹಿನಿ (ಎಚ್‌ವೈವಿ) ಸಂಘಟನೆ ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವೇ ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕೇಸರಿ ಪಕ್ಷಕ್ಕೆ ಆಘಾತ ನೀಡಿದೆ. ಪೂರ್ವ ವಲಯದ ಮೂರು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಎಚ್‌ವೈವಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಸಂಘಟನೆಯ ರಾಜ್ಯ ಘಟಕದ ಮುಖ್ಯಸ್ಥ ಸುನಿಲ್ ಸಿಂಗ್ ತಿಳಿಸಿದ್ಧಾರೆ. ಪದ್ರಾನಾ, ಖಡ್ಡಾ, ಕಾಸ್ಯಾ, ಪನಿಯಾರಾ, ಸಿಸ್ವಾ ಮತ್ತು ಫರೆಂದಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನೆಯ ಅಭ್ಯರ್ಥಿಗಳು ಈಗಾಗಲೇ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿಗಳ ಎದುರು ಸೆಣಸಲಿರುವುದು ಕುತೂಹಲಕಾರಿಯಾಗಿದೆ. ಆದರೆ ಸಂಘಟನೆಯ ಈ ನಿರ್ಧಾರ ಕಾನೂನು ಬಾಹಿರ ಮತ್ತು ಸಂಘಟನೆಯ ನೀತಿಗೆ ವಿರುದ್ಧವಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ. ಎಚ್‌ವೈವಿ ಸಾಮಾಜಿಕ ಸಂಘಟನೆಯಾಗಿದ್ದು ರಾಜಕೀಯ ಕ್ಷೇತ್ರ ಪ್ರವೇಶಿಸುವ ಯಾವುದೇ ಇರಾದೆ ಇಲ್ಲ ಎಂದು ತಿಳಿಸಿರುವ ಅವರು, ರಾಜಕೀಯದತ್ತ ಒಲವು ತೋರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.