ತಾಯಿ, ಮಗುವಿನ ಪ್ರಾಣ ಉಳಿಸಿ ಹುತಾತ್ಮನಾದ ರೈಲ್ವೆ ಉದ್ಯೋಗಿ ಬಾದಲ್ ಮಿಯಾ
ಢಾಕಾ, ಜ.29: ತಾಯಿ ಮಗುವಿನ ಪ್ರಾಣವನ್ನು ಉಳಿಸಿದ ಬಾಂಗ್ಲಾ ರೈಲ್ವೆ ಉದ್ಯೋಗಿಯೊಬ್ಬ ರೈಲು ಬಡಿದು ಹುತಾತ್ಮನಾದ ಘಟನೆ ಶನಿವಾರ ನಡೆದಿದೆ. ಬಾಂಗ್ಲಾದೇಶದ ರೈಲು ಹಳಿ ನಿರ್ವಹಣಾ ಕಾರ್ಮಿಕ ಬಾದಲ್ ಮಿಯಾ (58) ಈ ಪ್ರಾಣರಕ್ಷಕ ಹುತಾತ್ಮ. ಢಾಕಾದಲ್ಲಿ ಒಬ್ಬ ಮಹಿಳೆ ಹಾಗೂ ಐದು ವರ್ಷದ ಬಾಲಕಿ ರೈಲು ಹಳಿ ದಾಟುವ ಪ್ರಯತ್ನದಲ್ಲಿದ್ದಾಗ ಇಂಟರ್‌ಸಿಟಿ ರೈಲೊಂದು ವೇಗವಾಗಿ ಆಗಮಿಸಿದಾಗ ಈ ಘಟನೆ ನಡೆದಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರೀಫ್ ಉಜ್ ಝಮಾನ್ ತಿಳಿಸಿದ್ದಾರೆ.
ಇದನ್ನು ನೋಡಿದ ಮಿಯಾ ತಕ್ಷಣ ಹಳಿಗೆ ಧುಮುಕಿ ಇಬ್ಬರನ್ನೂ ಮುಂದಕ್ಕೆ ತಳ್ಳಿದರು. ಈ ಮೂಲಕ ಇಬ್ಬರ ಪ್ರಾಣವನ್ನೂ ರಕ್ಷಿಸುವಲ್ಲಿ ಅವರು ಸಫಲರಾದರು. ಆದರೆ ರೈಲು ಹಳಿಯಿಂದ ಧುಮುಕಲು ಯತ್ನಿಸುವಾಗ ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟರು ಎಂದು ವಿವರಿಸಿದ್ದಾರೆ.
"ಮಿಯಾ ಸ್ಥಳದಲ್ಲೇ ಮೃತಪಟ್ಟರು. ಅಂಥ ಸಹೋದ್ಯೋಗಿಯನ್ನು ಕಳೆದುಕೊಂಡಿರುವುದು ನಮಗೆ ಆಘಾತ ತಂದಿದ್ದು, ಪರೋಪಕಾರ ಹಾಗೂ ನೈಜ ಕಾಳಜಿಗೆ ಇದು ಒಳ್ಳೆಯ ನಿದರ್ಶನ" ಎಂದು ಹೇಳಿದ್ದಾರೆ. ಎಂಟು ಮಕ್ಕಳ ತಂದೆಯಾದ ಮಿಯಾ ಸದ್ಯದಲ್ಲೇ ನಿವೃತ್ತರಾಗಲಿದ್ದರು.