ಅಮೆರಿಕದ ದಾಳಿಯಲ್ಲಿ 30 ಅಲ್-ಖಾಯಿದ ಉಗ್ರರ ಹತ್ಯೆ: 10 ನಾಗರಿಕರೂ ಬಲಿ
ಏಡನ್, ಜ. 29: ಯಮನ್‌ನಲ್ಲಿ ರವಿವಾರ ಮುಂಜಾನೆ ಅಮೆರಿಕ ನಡೆಸಿದ ವಾಯು ದಾಳಿಯೊಂದರಲ್ಲಿ 30 ಶಂಕಿತ ಅಲ್-ಖಾಯಿದ ಭಯೋತ್ಪಾದಕರು ಮತ್ತು 10 ನಾಗರಿಕರು ಮೃತಪಟ್ಟಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಯೊಬ್ಬರು ತಿಳಿಸಿದರು.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಜನವರಿ 20ರಂದು ಅಧಿಕಾರ ವಹಿಸಿಕೊಂಡ ಬಳಿಕ, ಅಮೆರಿಕದ ಪಡೆಗಳು ಯಮನ್‌ನಲ್ಲಿ ನಡೆಸಿದ ಮೊದಲ ಕಾರ್ಯಾಚರಣೆ ಇದಾಗಿದೆ.
ಬೈದ ಎಂಬ ಮಧ್ಯದ ರಾಜ್ಯದ ಯಾಕ್ಲ ಜಿಲ್ಲೆಯ ಮೇಲೆ ನಡೆದ ದಾಳಿಯಲ್ಲಿ ಏಳು ಮಹಿಳೆಯರು ಮತ್ತು ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಅಲ್-ಖಾಯಿದದೊಂದಿಗೆ ಸಂಪರ್ಕ ಹೊಂದಿದ ಮೂವರು ಬುಡಕಟ್ಟು ಮುಖ್ಯಸ್ಥರ ಮನೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂಬುದಾಗಿ ಈ ಮೊದಲು ಬುಡಕಟ್ಟು ಮೂಲಗಳು ಹೇಳಿದ್ದವು.
ಅಲ್-ಖಾಯಿದ ಭಯೋತ್ಪಾದಕರು ಬಳಸುತ್ತಿದ್ದ ಶಾಲೆ, ಮಸೀದಿ ಮತ್ತು ವೈದ್ಯಕೀಯ ಚಿಕಿತ್ಸಾ ಕೇಂದ್ರವೊಂದರ ಮೇಲೆ ಅಪಾಚೆ ಹೆಲಿಕಾಪ್ಟರ್‌ಗಳು ದಾಳಿ ನಡೆಸಿದವು ಎಂದು ಅಧಿಕಾರಿ ಹೇಳಿದರು.