ಸುಡುವ ಬಿಸಿಲಲ್ಲೂ ಕಾಬಾದ ಸುತ್ತಲಿನ ನೆಲ ತಂಪಾಗಿರುವುದು ಹೇಗೆ ?
ಮಕ್ಕಾ, ಜ.30: ಉಮ್ರಾ ಅಥವಾ ಹಜ್ ಯಾತ್ರೆಗೆ ಹೋದವರು ಅಲ್ಲಿನ ಗ್ರ್ಯಾಂಡ್ ಮಸೀದಿ ಹಾಗೂ ಪವಿತ್ರ ಕಾಬಾದ ಸುತ್ತಲಿನ ಶಿಲಾಮಯ ನೆಲ ಬಹಳ ತಂಪಾಗಿರುವುದನ್ನು ಗಮನಿಸಿರಬಹುದು. ಸೌದಿಯ ಅತಿಯಾದ ಉಷ್ಣಾಂಶದ ವಾತಾವರಣದಲ್ಲಿ ಇದು ಹೇಗೆ ಸಾಧ್ಯ ಎಂದು ಹಲವರು ಹಲವು ವಿಧದಲ್ಲಿ ಯೋಚಿಸಿರಬಹುದು ಹಾಗೂ ವಿಸ್ಮಯವನ್ನೂ ಪಟ್ಟಿರಬಹುದು.
ಇದೀಗ ಇದಕ್ಕೆ ಕಾರಣವೊಂದನ್ನುಎರಡು ಪವಿತ್ರ ಮಸೀದಿಗಳ ಮೇಲುಸ್ತುವಾರಿ ಹೊಂದಿರುವ ಜನರಲ್ ಪ್ರೆಸಿಡೆನ್ಸಿಯ ಕಚೇರಿ ತನ್ನ ಅಧಿಕೃತ ಉತ್ತರದಲ್ಲಿ ನೀಡಿದ್ದು, ನೆಲ ತಂಪಾಗಿರಲು ಅದಕ್ಕಾಗಿ ಉಪಯೋಗಿಸಿದ ಶಿಲೆ ಕಾರಣವೆಂದು ಹೇಳಿದೆ.
ಸೌದಿ ಅರೇಬಿಯಾ ಬಹಳ ವಿರಳವಾದ ಥಸ್ಸೋಸ್ ಶಿಲೆಕಲ್ಲುಗಳನ್ನು ನೆಲಹಾಸಿಗಾಗಿ ಗ್ರೀಸ್ ದೇಶದಿಂದ ಆಮದು ಮಾಡುತ್ತಿದ್ದು ಈ ಶಿಲೆಕಲ್ಲು ಸೂರ್ಯನ ಕಿರಣಗಳನ್ನು ಪ್ರತಿಫಲಿಸುವುದರಿಂದ ಅದರ ಶಾಖವನ್ನು ಕೂಡ ಇದು ಕಡಿಮೆಗೊಳಿಸುತ್ತದೆ.
ಶಿಲಾಮಯ ನೆಲದ ಕೆಳಗೆ ಇರುವ ಹಲವಾರು ತಂಪು ನೀರಿನ ಪೈಪುಗಳಿಂದ ನೆಲ ತಂಪಾಗಿದೆಯೆಂಬ ಕೆಲವರ ವಾದವನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ.