ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಸಹಕರಿಸುತ್ತಿದ್ದಾರೆಯೇ ನಿತೀಶ್ ಕುಮಾರ್?

Update: 2017-01-30 07:37 GMT

ಪಾಟ್ನಾ, ಜ.30: ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿ(ಯು) ಅಧ್ಯಕ್ಷ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಗೆ ತಮ್ಮ ಪಕ್ಷದ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಬಿಜೆಪಿಗೆ ಸಹಾಯ ಮಾಡುವ ಉದ್ದೇಶದಿಂದ ಆ ಪಕ್ಷದೊಂದಿಗೆ ರಹಸ್ಯ ಒಪ್ಪಂದವೊಂದಕ್ಕೆ ಬಂದಿದ್ದಾರೆಯೇ? ಇಂತಹ ಒಂದು ವದಂತಿ ರಾಜಕೀಯ ವಲಯಗಳಲ್ಲಿ ಬಹಳವಾಗಿ ಇತ್ತೀಚೆಗೆ ಕೇಳಿ ಬರಲಾರಂಭಿಸಿದೆ. ಸ್ವತಃ ನಿತೀಶ್ ಅವರು ಚುನಾವಣಾ ಪ್ರಚಾರ ಕಾರ್ಯದಿಂದ ದೂರವುಳಿದಿರುವುದು ಈ ವದಂತಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದೆ.

ಉತ್ತರ ಪ್ರದೇಶದಲ್ಲಿ ಜಾತ್ಯತೀತ ಮತಗಳು ಹಂಚಿ ಹೋಗದಂತೆ ತಡೆಯುವ ಸಲುವಾಗಿ ಜೆಡಿ(ಯು)ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಹಾಗೂ ತನ್ನ ಅಭ್ಯರ್ಥಿಗಳನ್ನು ಅದು ಕಣಕ್ಕಿಳಿಸಿದ್ದೇ ಆದಲ್ಲಿ ಮತಗಳು ವಿಭಜನೆಗೊಂಡು ಬಿಜೆಪಿಗೆ ಸಹಾಯ ಮಾಡಿದಂತಾಗುವುದು ಎಂದು ಜೆಡಿ(ಯು) ಪಕ್ಷದ ಮೂಲಗಳು ತಿಳಿಸಿವೆ. ಆದರೆ ಜೆಡಿ(ಯು) ಪಕ್ಷದ 50 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದರೂ ಯಾರೊಬ್ಬರನ್ನೂ ಕಣಕ್ಕಿಳಿಸಿಲ್ಲ ಹಾಗೂ ಇದಕ್ಕೆ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಮಾಡಿರುವ ರಹಸ್ಯ ಒಡಂಬಡಿಕೆಯೇ ಕಾರಣವೆನ್ನುತ್ತವೆ ಕೆಲ ಮೂಲಗಳು. ನಿತೀಶ್ ಕುಮಾರ್ ಅವರ ಈ ನಿರ್ಧಾರ ನೇರವಾಗಿ ಬಿಜೆಪಿಗೆ ಸಹಾಯ ಮಾಡಿದಂತಾಗುವುದು ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.

ನಿತೀಶ್ ಅವರು ಕುರ್ಮಿ ಸಮುದಾಯಕ್ಕೆ ಸೇರಿದವರಾಗಿದ್ದು ಉತ್ತರ ಪ್ರದೇಶದ ಕುರ್ಮಿ ಸಮುದಾಯದ ಮಂದಿ ಹಿಂದಿನಿಂದಲೂ ಬಿಜೆಪಿಗೆ ಮತ ಹಾಕುವವರಾಗಿದ್ದಾರೆ. ಒಂದು ವೇಳೆ ನಿತೀಶ್ ಅವರು ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದೇ ಆದರೆ ಬಿಜೆಪಿಗೆ ಕುರ್ಮಿಗಳ ಮತಗಳು ತಪ್ಪಿಹೋಗುವುದರಿಂದ ಅದು ನಿತೀಶ್ ಅವರೊಂದಿಗೆ ರಹಸ್ಯ ಒಪ್ಪಂದಕ್ಕೆ ಬಂದಿದೆಯೆನ್ನುತ್ತವೆ ಮೂಲಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News