ನಮ್ಮನ್ನು ಟೀಕಿಸುತ್ತಲೇ ಇದ್ದರೆ ಫಡ್ನವೀಸ್ ‘ಮನೆಗೆ ಹೋಗುತ್ತಾರೆ’:ಶಿವಸೇನೆ

Update: 2017-01-30 10:45 GMT

ಮುಂಬೈ,ಜ.30: ತನ್ನ ಮಿತ್ರಪಕ್ಷ ಬಿಜೆಪಿ ವಿರುದ್ಧ ತನ್ನ ದಾಳಿಯನ್ನು ಇನ್ನಷ್ಟು ತೀವ್ರ ಗೊಳಿಸಿರುವ ಶಿವಸೇನೆಯು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದಲ್ಲಿ ತನ್ನ ವಿರುದ್ಧ ಆರೋಪಗಳನ್ನು ಹೊರಿಸುವುದನ್ನು ಮುಂದುವರಿಸಿದರೆ ಅವರನ್ನು ‘ಮನೆಗೆ ಕಳುಹಿಸಲಾಗುವುದು ’ಎಂದು ಹೇಳಿದೆ.

ಮುಂಬೈ ಮತ್ತು ರಾಜ್ಯಾದ್ಯಂತ ಪೌರಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿಯನ್ನು ಮಾಡಿಕೊಳ್ಳದಿರಲು ಶಿವಸೇನೆಯು ನಿರ್ಧರಿಸಿದ ಬೆನ್ನಿಗೇ ಫಡ್ನವೀಸ್ ಅವರು ಶನಿವಾರ ಇಲ್ಲಿ ಬಿಜೆಪಿ ರ್ಯಾಲಿಯಲ್ಲಿ ಅದನ್ನು ಹಿಗ್ಗಾಮುಗ್ಗಾ ಟೀಕಿಸಿ ದ್ದರು.

 ಅವರು (ಬಿಜೆಪಿ ನಾಯಕರು) ಕಳೆದ 28 ವರ್ಷಗಳಿಂದಲೂ ರಾಮಮಂದಿರವನ್ನು ನಿರ್ಮಿಸುತ್ತೇವೆ ಎಂದು ಹೇಳಿಕೊಳ್ಳುತ್ತಲೇ ಬಂದಿದ್ದಾರೆ ಮತ್ತು ಏಕರೂಪ ನಾಗರಿಕ ಸಂಹಿತೆಯ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಈಗವರು ಮುಂಬೈ ಮಹಾನಗರವನ್ನು ಶ್ರೀಮಂತರ ಮಡಿಲಿಗೆ ಹಾಕಲು ಬಯಸಿದ್ದಾರೆ. ಈಗೇನೋ ಸೇನೆಯು ಫಡ್ನವೀಸ್‌ರನ್ನು ಸಹಿಸಿಕೊಂಡಿದೆ. ಆದರೆ ಅವರು ಸೇನೆಯ ವಿರುದ್ಧ ಕೀಳುಮಟ್ಟದ ಆರೋಪಗಳನ್ನು ಮಾಡುವುದನ್ನು ಮುಂದುವರಿಸಿದರೆ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಮನೆಗೆ ಕಳುಹಿಸಲಾಗುವುದು ಎಂದು ಶಿವಸೇನೆಯ ಮುಖವಾಣಿ ‘ಸಾಮನಾ ’ತನ್ನ ಸೋಮವಾರದ ಸಂಚಿಕೆಯ ಸಂಪಾದಕೀಯದಲ್ಲಿ ಎಚ್ಚರಿಕೆ ನೀಡಿದೆ.

ಮಹಾನಗರದಲ್ಲಿ ಪಕ್ಷವು ಮಾಡಿರುವ ಕೆಲಸಗಳೇ ಅದರ ಗೆಲುವಿನ ಮಂತ್ರವಾಗಿದ್ದು, ಚುನಾವಣೆಯಲ್ಲಿ ಗೆಲ್ಲಲು ಅದಕ್ಕೆ ಗೂಂಡಾಗಳು ಮತ್ತು ಹಫ್ತಾ ವಸೂಲಿಕೋರರ ಅಗತ್ಯವಿಲ್ಲ ಎಂದಿರುವ ಲೇಖನವು, ಉತ್ತರ ಪ್ರದೇಶ ಮತ್ತು ಗೋವಾದಂತಹ ರಾಜ್ಯಗಳಲ್ಲಿ ಗೂಂಡಾಗಳು ಮತ್ತು ಕ್ರಿಮಿನಲ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ವಿಶೇಷ ಗವಾಕ್ಷಿಯನ್ನೇ ಬಿಜೆಪಿ ತೆರೆದಿದೆ. ಮಹಾರಾಷ್ಟ್ರದಲ್ಲಂತೂ ಇಂತಹ ಜನರನ್ನು ಸೇರಿಸಿಕೊಳ್ಳಲು ಅದು ತನ್ನ ಹೆಬ್ಬಾಗಿಲನ್ನೇ ತೆರೆದಿಟ್ಟಿದೆ. ಅತ್ಯಾಚಾರಿ,ಕೊಲೆಗಾರ,ಭ್ರಷ್ಟ ಎಂದು ಸರ್ಟಿಫಿಕೇಟ್ ಇದ್ದವರಿಗೆ ಬಿಜೆಪಿಯಲ್ಲಿ ಸ್ವಾಗತವಿದೆ. ಇದು ಅದು ನೀಡುತ್ತಿರುವ ಪ್ಯಾಕೇಜ್ ಅಗಿದೆ ಎಂದು ಕುಟುಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News