×
Ad

ಅಸಾರಾಂಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್ ಹೊಸ ಎಫ್‌ಐಆರ್ ದಾಖಲಿಸಲು ಸೂಚನೆ

Update: 2017-01-30 23:59 IST

ಹೊಸದಿಲ್ಲಿ, ಜ.30: ಆರೋಗ್ಯ ಸರಿಯಲ್ಲದ ಕಾರಣ ಜಾಮೀನು ನೀಡಬೇಕೆಂದು ಸ್ವಯಂಘೋಷಿತ ದೇವಮಾನವ ಅಸಾರಾಂ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿರುವ ಸುಪ್ರೀಂಕೋರ್ಟ್, ಈತನಿಗೆ 1 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೆ, ಜೈಲಿನಿಂದ ಹೊರಬರುವ ಉದ್ದೇಶದಿಂದ ಸುಳ್ಳು ದಾಖಲೆಪತ್ರ ಸಲ್ಲಿಸಿದ ಕಾರಣ ಅಸಾರಾಂ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ.

     ಅಸಾರಾಂನ ಪ್ರಾಸ್ಟೇಟ್ ಗ್ರಂಥಿಯ ತೊಂದರೆಯನ್ನು ನಿರ್ಧರಿಸಲು ಅಗತ್ಯವಿರುವ ಪರೀಕ್ಷೆಗೆ ಸಹಕರಿಸಲು ಆತ ನಿರಾಕರಿಸುತ್ತಿರುವ ಕಾರಣ ಈ ಪ್ರಕ್ರಿಯೆ ಅಪೂರ್ಣವಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಮಂಡಳಿ ನೀಡಿರುವ ವರದಿಯನ್ನು ಪ್ರಧಾನ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರನ್ನೊಳಗೊಂಡ ಪೀಠವೊಂದು ವಿಚಾರಣೆ ಸಂದರ್ಭ ಉಲ್ಲೇಖಿಸಿತು. ಅಸಾರಾಂನ ಆರೋಗ್ಯಸ್ಥಿತಿ ಸರಿಯಿಲ್ಲ ಎಂದು ಜೋಧ್‌ಪುರ ಜೈಲಿನ ಅಧೀಕ್ಷರು ತಿಳಿಸಿರುವ ಪತ್ರವನ್ನು ಮಾಹಿತಿ ಹಕ್ಕಿನಡಿ ಪಡೆಯಲಾಗಿದೆ ಎಂದು ಹೇಳಿ ಪತ್ರವೊಂದನ್ನು ಅಸಾರಾಂನ ವಕೀಲರು ಕೋರ್ಟ್‌ಗೆ ಸಲ್ಲಿಸಿದ್ದರು. ತಾನು ಆ ರೀತಿಯ ಪತ್ರವನ್ನೇ ನೀಡಿಲ್ಲ ಎಂದು ಜೈಲು ಅಧೀಕ್ಷಕರು ತಿಳಿಸಿದ್ದರು. ಈ ಪತ್ರ ನಕಲಿ ಎಂದು ಬಳಿಕ ಅಸಾರಾಂನ ವಕೀಲರು ಒಪ್ಪಿಕೊಂಡಿದ್ದರು ಮತ್ತು ಕ್ಷಮಾಪಣೆ ಕೋರುವ ಬಯಕೆ ವ್ಯಕ್ತಪಡಿಸಿದ್ದರು. ಆದರೆ ಕೋರ್ಟ್ ಇದನ್ನು ನಿರಾಕರಿಸಿತ್ತು. ಜೋಧ್‌ಪುರದಲ್ಲಿರುವ ತನ್ನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪದಡಿ 77 ವರ್ಷದ ಅಸಾರಾಂನನ್ನು 2013ರಲ್ಲಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳಾಗಿದ್ದ ಹಲವರಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿತ್ತು ಮತ್ತು ಉಳಿದವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News