ಮುಂದುವರಿದ ಆಡಳಿತಪಕ್ಷ- ಪ್ರತಿಪಕ್ಷಗಳ ಜಟಾಪಟಿ

Update: 2017-01-30 18:42 GMT

ಕಾಸರಗೋಡು, ಜ.30: ವಸತಿ ಯೋಜನೆಯಲ್ಲಿ ಅವ್ಯವಹಾರ ಆರೋಪಕ್ಕೆ ಗುರಿಯಾಗಿರುವ ಕಾಸರಗೋಡು ನಗರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ನೈಮುನ್ನಿಸಾ ರಾಜೀನಾಮೆ ನೀಡಬೇಕೆಂಬ ಪ್ರತಿಪಕ್ಷದ ಹೋರಾಟ ಸೋಮವಾರ ನಾಟಕೀಯ ತಿರುವು ಮತ್ತು ನೂಕು ತಳ್ಳಾಟಕ್ಕೆ ಕಾರಣವಾಯಿತು. ಈ ನಡುವೆ ಬಿಜೆಪಿ ಸದಸ್ಯೆಯೋರ್ವರು ಕುಸಿದುಬಿದ್ದರು ಸ್ಥಳಕ್ಕಾಗಮಿಸಿದ ಕಾಸರಗೋಡು ನಗರ ಠಾಣಾ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

  ವಸತಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಬಗ್ಗೆ ವಿಜಿಲೆನ್ಸ್ ತನಿಖೆ ಕೈಗೆತ್ತಿಕೊಂಡಿದ್ದು, ಸ್ಥಾಯಿ ಸಮಿತಿಯ ಅಧ್ಯಕ್ಷೆ ನೈಮುನ್ನಿಸಾ ನೇತೃತ್ವದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರಾಜೀನಾಮೆ ನೀಡುವಂತೆ ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಪಕ್ಷ ಬಿಜೆಪಿ ಹೋರಾಟ ನಡೆಸುತ್ತಿದೆ.

  ಈ ಬೆಳವಣಿಗೆ ನಡುವೆ ಸ್ಥಾಯೀ ಸಮಿತಿಯ ಅಧ್ಯಕ್ಷೆ ನೈಮುನ್ನಿಸಾ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗ್ಗೆ ತನ್ನ ಕಚೇರಿಯಲ್ಲಿ ಸಭೆ ಕರೆದಿದ್ದು, ಈ ಬಗ್ಗೆ ಮಾಹಿತಿ ತಿಳಿದ ಪ್ರತಿಪಕ್ಷದ ಬಿಜೆಪಿ ಸದಸ್ಯರು ಪಿ.ರಮೇಶ ನೇತೃತ್ವದಲ್ಲಿ ಕಚೇರಿಗೆ ನುಗ್ಗಿಸಭೆಗೆ ಅಡ್ಡಿಪಡಿಸಲೆತ್ನಿಸಿದ್ದು, ಈ ಸಂದರ್ಭ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ನೂಕು ತಳ್ಳಾಟ, ಹೊಡೆದಾಟ ನಡೆಯಿತು. ಇದರ ಮಧ್ಯೆ ನೈಮುನ್ನಿಸಾ ಅವರನ್ನು ಆಡಳಿತ ಪಕ್ಷದವರು ಬಲವಂತವಾಗಿ ಕಚೇರಿಯಿಂದ ಹೊರಗೆ ಕರೆದೊಯ್ದರು.

  ಈ ನಡುವೆ ಬಿಜೆಪಿ ಸದಸ್ಯೆ ಸವಿತಾಟೀಚರ್ ಕುಸಿದುಬಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈತನ್ಮಧ್ಯೆ ನಗರಸಭಾ ಅಧ್ಯಕ್ಷೆ ಬೀಾತಿಮ್ಮ ಇಬ್ರಾಹೀಂ ನಗರಸಭಾ ಕಚೇರಿಗೆ ತಲುಪಿದ್ದು, ಕಚೇರಿಯೊಳಗೆ ನುಗ್ಗಲು ಬಿಜೆಪಿ ಸದಸ್ಯರು ಯತ್ನಿಸಿದ್ದು, ಕೂಡಲೇ ಅಧ್ಯಕ್ಷರು ಒಳಗಿಂದ ಬಾಗಿಲು ಮುಚ್ಚಿದರು. ಇದರಿಂದ ಕಚೇರಿ ಹೊರಗಡೆ ಬಿಜೆಪಿ ಸದಸ್ಯರು ಘೋಷಣೆ ಕೂಗಿ ಮುತ್ತಿಗೆ ಹಾಕಿದರು.

 ಪಂಚಾಯತ್ ಕಾರ್ಯದರ್ಶಿ ಸ್ಥಳಕ್ಕಾಗಮಿಸಿದ ಬಳಿಕ ಬಾಗಿಲು ತೆರೆಯಲಾಯಿತು. ಪೊಲೀಸರು ಉಭಯ ಪಕ್ಷದವರನ್ನು ಸಮಾಧಾನ ಪಡಿಸಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು. ಬಳಿಕ ಹೊರಬಂದ ಪ್ರತಿಪಕ್ಷದ ನಾಯಕ ಪಿ.ರಮೇಶ ಅವ್ಯವಹಾರಕ್ಕೆ ಗುರಿಯಾಗಿರುವ ನೈಮುನ್ನಿಸಾ ರಾಜೀನಾಮೆ ನೀಡುವ ಹೋರಾಟ ಮುಂದುವರಿಯಲಿದೆ ಎಂದರು.

ಕಲಾಪಕ್ಕೆ ಅಡ್ಡಿಪಡಿಸಿ, ಹೋರಾಟ ನಡೆಸುವ ಮೂಲಕ ನಗರಸಭೆ ಯೋಜನೆಗಳನ್ನು ಅಡ್ಡಿಪಡಿಸುವ ಕುತಂತ್ರ ಬಿಜೆಪಿಯದ್ದು ಎಂದು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ. ಅಬ್ದುರ್ರಹ್ಮಾನ್ ದೂರಿದರು.

 ನಗರಸಭೆಯಲ್ಲಿ ಹೀಗೆ ಅಹಿತಕರ ಘಟನೆ ಮರುಕಳಿಸುತ್ತಿರುವ ಹಿನ್ನಲೆಯಲ್ಲಿ ಚರ್ಚೆ ನಡೆಸಿ ಪರಿಹರಿಸಲು ಸಾಧ್ಯವಿಲ್ಲದಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ ಎಂದು ನಗರ ಠಾಣಾ ಸಬ್‌ಇನ್‌ಸ್ಪೆಕ್ಟರ್ ಅಜಿತ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News