ಬಾಂಬ್ ಬೆದರಿಕೆ ಆರೋಪ: ಅಮೆರಿಕ ವಿಮಾನ ನಿಲ್ದಾಣದಲ್ಲಿ ಭಾರತೀಯನ ಬಂಧನ

Update: 2017-01-31 05:51 GMT

ಹೊಸದಿಲ್ಲಿ, ಜ.31: ಗುಜರಾತ್ ಮೂಲದ 53 ವರ್ಷದ ಉದ್ಯಮಿ ಪರಮನ್ ರಾಧಾಕೃಷ್ಣ ಎಂಬವರನ್ನು ಅಮೆರಿಕದ ಉತ್ತರ ಡಕೋಟಾದ ಗ್ರ್ಯಾಂಡ್ ಫೋರ್ಕ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಆರೋಪದ ಮೇಲೆ ಶನಿವಾರ ಬಂಧಿಸಲಾಗಿದೆ. ತಮ್ಮಲ್ಲಿರುವ ಬ್ಯಾಗೊಂದರಲ್ಲಿ ಸ್ಫೋಟಕವಿದೆಯೆಂದು ಅವರು ಟ್ರಾವೆಲ್ ಏಜಂಟ್ ಬಳಿ ಹೇಳಿದ್ದರೆನ್ನಲಾಗಿದೆ. ಅವರೀಗ ಉಗ್ರವಾದ ಆರೋಪ ಎದರಿಸುತ್ತಿದ್ದು, ಕಸ್ಟಡಿಯಲ್ಲಿದ್ದಾರೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ ರಾಧಾಕೃಷ್ಣನ್ ಅವರು ಅಮೆರಿಕಕ್ಕೆ ಒಂದು ವಾರದ ಬ್ಯುಸಿನೆಸ್ ಟ್ರಿಪ್ ನಿಮಿತ್ತ ತೆರಳಿದ್ದು, ಅಲ್ಲಿಂದ ಹಿಂದಿರುಗುವಾಗ ಈ ಘಟನೆ ನಡೆದಿದೆ. ರಾಧಾಕೃಷ್ಣ ಅವರು ಗ್ರ್ಯಾಂಡ್ ಫೋರ್ಕ್ಸ್ ನಿಂದ ಮಿನ್ನಿಯಾ ಪೊಲಿಸ್ ಗೆ ಪ್ರಯಾಣಿಸುವವರಿದ್ದರು. ರಾಧಾಕೃಷ್ಣ ತನ್ನ ಬಳಿ ಹೇಳಿದ್ದನ್ನು ಟ್ರಾವೆಲ್ ಏಜಂಟ್ ಅಧಿಕಾರಿಗಳಿಗೆ ತಿಳಿಸಿದ ನಂತರ ಪೊಲೀಸ್ ಅಧಿಕಾರಿಗಳು ನಿಲ್ದಾಣಕ್ಕೆ ಆಗಮಿಸಿದ್ದರು. ಬಾಂಬ್ ನಿಷ್ಕ್ರಿಯ ದಳವೂ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿತ್ತಲ್ಲದೆ, ಸ್ವಲ್ಪ ಸಮಯ ವಿಮಾನ ನಿಲ್ದಾಣದ ಕಾರ್ಯಚಟುವಟಿಕೆಗಳನ್ನೂ ಸ್ಥಗಿತಗೊಳಿಸಲಾಗಿತ್ತು. ತನಿಖೆಯ ನಂತರ ಯಾವುದೇ ಸ್ಫೋಟಕ ಪತ್ತೆಯಾಗದೇ ಇರುವುದರಿಂದ ಮತ್ತೆ ಯಥಾಸ್ಥಿತಿ ಮುಂದುವರಿಯಿತು.

ಈತನ್ಮಧ್ಯೆ ಕಸ್ಟಡಿಯಲ್ಲಿರುವ ಉದ್ಯಮಿಯ ಪತ್ನಿ ಸಹಾಯ ಯಾಚಿಸಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮಾಡಿದ್ದು, ತಾವು ಈ ಬಗ್ಗೆ ಭಾರತೀಯ ದೂತಾವಾಸ ಕಚೇರಿಯನ್ನು ಸಂಪರ್ಕಿಸಿ ವಿಚಾರಿಸುವುದಾಗಿ ಸುಷ್ಮಾ ಹೇಳಿದ್ದಾರೆ.

ರಾಧಾಕೃಷ್ಣನ್ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ದೂರಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸಹಿತ ಅವರ ಹಲವು ಮಿತ್ರರು ಸಚಿವೆ ಸುಷ್ಮಾ ಸ್ವರಾಜ್ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕೆಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News