ಟ್ರಂಪ್ ಪ್ರಯಾಣ ನಿರ್ಬಂಧವನ್ನು ಬೆಂಬಲಿಸದ ಅಟಾರ್ನಿ ಜನರಲ್ ವಜಾ
ವಾಷಿಂಗ್ಟನ್, ಜ.31: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಳು ಮುಸ್ಲಿಂ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶಿಸಿದಂತೆ ವಿಧಿಸಿರುವ ನಿರ್ಬಂಧವನ್ನು ವಿರೋಧಿಸಿ ಅದನ್ನು ಬೆಂಬಲಿಸದಂತೆ ನ್ಯಾಯಾಂಗ ಇಲಾಖೆಯ ವಕೀಲರುಗಳಿಗೆ ಕರೆ ನೀಡಿದ್ದ ಅಟಾರ್ನಿ ಜನರಲ್ ಸ್ಯಾಲಿ ಯೇಟ್ಸ್ ಅವರನ್ನು ಟ್ರಂಪ್ ವಜಾಗೊಳಿಸಿದ್ದಾರೆ.
‘‘ಅಮೆರಿಕದ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಆದೇಶವೊಂದನ್ನು ಪಾಲಿಸಲು ನಿರಾಕರಿಸುವ ಮೂಲಕ ಯೇಟ್ಸ್ ತಮ್ಮ ಇಲಾಖೆಗೆ ದ್ರೋಹವೆಸಗಿದ್ದಾರೆ’’ ಎಂದು ಶ್ವೇತ ಭವನ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ.
ವರ್ಜೀನಿಯಾದ ಅಟಾರ್ನಿ ಡಾನಾ ಬೋಂಟೆ ಅವರನ್ನು ತಾತ್ಕಾಲಿಕ ಅಟಾರ್ನಿ ಜನರಲ್ ಆಗಿ ನೇಮಿಸಲಾಗಿದೆ. ತಾನು ಟ್ರಂಪ್ ಅವರ ಆದೇಶವನ್ನು ಪಾಲಿಸಲು ಒಪ್ಪಿರುವುದಾಗಿ ಬೋಂಟೆ ದಿ ವಾಷಿಂಗ್ಟನ್ ಪೋಸ್ಟ್ ಗೆ ಹೇಳಿದ್ದಾರೆ.
ವಜಾಗೊಂಡಿರುವ ಅಟಾರ್ನಿ ಜನರಲ್ ಯೇಟ್ಸ್ ಅವರು ಒಬಾಮ ಆಡಳಿತದ ಅವಧಿಯಲ್ಲಿ ನೇಮಕಗೊಂಡಿರುವವರಾದರೂ, ಅಧ್ಯಕ್ಷರ ಆದೇಶವನ್ನು ಜಾರಿಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವವರೊಬ್ಬರು ಹಾಗೆ ಮಾಡಲು ನಿರಾಕರಿಸಿರುವ ಧೈರ್ಯ ತೋರಿರುವುದು ಪ್ರಾಯಶಃ ಒಂದು ಬಹಳ ವಿರಳ ಘಟನೆಯಾಗಿದೆ.
ಟ್ರಂಪ್ ಅವರ ಆದೇಶವನ್ನು ವಿರೋಧಿಸಿ ಸ್ಟೇಟ್ ಡಿಪಾರ್ಟ್ ಮೆಂಟ್ ಅಧಿಕಾರಿಗಳು ಸೋಮವಾರ ಮೆಮೊ ಒಂದರ ವಿವಿಧ ಕರಡುಗಳನ್ನು ಸಿದ್ಧಪಡಿಸಿ ತಮ್ಮೊಳಗೆ ಅವುಗಳನ್ನು ಹಂಚಿಕೊಂಡಿದ್ದಾರೆ. ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಇಲಾಖೆಯಲ್ಲಿದ್ದ ಡಿಸ್ಸೆಂಟ್ ಚಾನಲ್ (ಅಸಮ್ಮತಿಯ ಚಾನಲ್) ತರಹವೇ ಈ ಬಾರಿ ಅಧಿಕಾರಿಗಳು ಸರಕಾರದ ವಿದೇಶಾಂಗ ನೀತಿಯೊಂದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಒಂದು ಕ್ರಮ ಅಮೆರಿಕದ ಮೇಲಿನ ದಾಳಿಯನ್ನು ತಪ್ಪಿಸುವುದಿಲ್ಲ ಬದಲಾಗಿ ಅಮೆರಿಕದ ನಾಗರಿಕರು ವಿಶ್ವದ ಇತರರೆದುರು ತಲೆತಗ್ಗಿಸುವಂತಾಗುವುದು ಎಂದು ಅಧಿಕಾರಿಗಳು ಹೇಳಲಾರಂಭಿಸಿದ್ದಾರೆ.