ಭಾರತೀಯ ಐಟಿ ಕಂಪೆನಿಗಳಿಗೆ ಟ್ರಂಪ್ ಉರುಳು : ಮಹತ್ವದ ಎಚ್-1ಬಿ ವೀಸಾ ವಿಧೇಯಕ ಮಂಡನೆ
ವಾಶಿಂಗ್ಟನ್,ಜ.31: ಅಮೆರಿಕದ ಕಂಪೆನಿಗಳು ವಿದೇಶಿ ಉದ್ಯೋಗಿಗಳನ್ನು ಭಾರೀ ಸಂಖ್ಯೆಯಲ್ಲಿ ನೇಮಿಸುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಟ್ರಂಪ್ ಆಡಳಿತವು ಸೋಮವಾರ ಮಹತ್ವದ ವಿಧೇಯಕವೊಂದನ್ನು ಮಂಡಿಸಿದೆ. ಈ ವಿಧೇಯಕದಡಿ ಎಚ್1ಬಿ ವೀಸಾ ಪಡೆಯುವ ವಿದೇಶಿ ಉದ್ಯೋಗಿಗಳ ಕನಿಷ್ಠ ವೇತನದ ಮಾನದಂಡವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ.
ಎಚ್-1ಬಿ ವೀಸಾ ಪಡೆಯುವವರ ಕನಿಷ್ಠ ವೇತನವನ್ನು 1.30 ಲಕ್ಷ ಡಾಲರ್‌ಗೆ ನಿಗದಿಪಡಿಸುವ ವಿಧೇಯಕವೊಂದನ್ನು ನೂತನ ಟ್ರಂಪ್ ಆಡಳಿತ ಸೋಮವಾರ ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ಮಂಡಿಸಿದೆ.ಈ ವಿಧೇಯಕದಿಂದಾಗಿ ಭಾರತೀಯ ಐಟಿ ಕಂಪೆನಿಗಳಿಗೆ ಭಾರೀ ದೊಡ್ಡ ಹೊಡೆತ ಬೀಳಲಿದೆಯೆಂದು ನಿರೀಕ್ಷಿಸಲಾಗಿದೆ.
ಒಂದು ವೇಳೆ ಈ ಮಸೂದೆಯು ಅಂಗೀಕಾರಗೊಂಡಲ್ಲಿ, ಭಾರತದ ಐಟಿ ವೃತ್ತಿಪರರು ಸೇರಿದಂತೆ ವಿದೇಶಿ ಉದ್ಯೋಗಿಗಳನ್ನು ಗುತ್ತಿಗೆಯಲ್ಲಿ ಪಡೆದುಕೊಳ್ಳುವುದಕ್ಕಾಗಿ ಎಚ್1-ಬಿ ವೀಸಾಗಳನ್ನು ಬಳಸುವುದು ಅಮೆರಿಕನ್ ಕಂಪೆನಿಗಳಿಗೆ ಭಾರೀ ಕಷ್ಟಕರವಾಗಲಿದೆ.
ಅಮೆರಿಕನ್ ಕಾಂಗ್ರೆಸ್‌ನ ರಿಪಬ್ಲಿಕನ್ ಸಂಸದ ರೆ ಲೊಫ್‌ಗ್ರೆನ್ ವಿಧೇಯಕವನ್ನು ಮಂಡಿಸಿ ಮಾತನಾಡುತ್ತಾ, ಈ ವಿಧೇಯಕವು ವೇತನವನ್ನು ಮೊಟಕುಗೊಳಿಸುವ ಹಾಗೂ ಉದ್ಯೋಗಗಳನ್ನು ಹೊರಗುತ್ತಿಗೆಗೆ ನೀಡುವ ಅಮೆರಿಕನ್ ಕಂಪೆನಿಗಳನ್ನು ನಿರುತ್ತೇಜನಗೊಳಿಸಲಿದೆ ಎಂದರು.
‘ಹೈಸ್ಕಿಲ್ಡ್ ಇಂಟೆಗ್ರಿಟಿ ಹಾಗೂ ಫೇರ್‌ನೆಸ್ ಆ್ಯಕ್ಟ್ 2017’ ಎಂದು ಕರೆಯಲಾಗುವ ಈ ವಿಧೇಯಕವು, ಸಮೀಕ್ಷೆಯೊಂದರ ಲೆಕ್ಕಾಚಾರದ ಪ್ರಕಾರ ಕನಿಷ್ಠ ವೇತನದಲ್ಲಿ ಶೇ.200ರಷ್ಟು ಹೆಚ್ಚಳ ಮಾಡಲು ಸಿದ್ಧವಿರುವ ಕಂಪೆನಿಗಳಿಗೆ ಮಾತ್ರ ಎಚ್1ಬಿ ವೀಸಾಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಲಿದೆ.
ಪ್ರಸ್ತುತ ಎಚ್1ಬಿ ವೀಸಾದಡಿ ಕೆಲಸ ಮಾಡುವ ವಿದೇಶಿ ಉದ್ಯೋಗಿಗಳ ಕನಿಷ್ಠ ವೇತನ 60 ಸಾವಿರ ಡಾಲರ್‌ನಷ್ಟಿದ್ದು, 1989ರಿಂದ ಬದಲಾಗದೆ ಇರುವ ಈ ಮಾನದಂಡವನ್ನ್ನು ಈಗ 1.30 ಲಕ್ಷ ಡಾಲರ್‌ಗೆ ಹೆಚ್ಚಿಸಲಾಗಿದೆ. ನೂತನ ಕಾನೂನಿನಿಂದ ಭಾರತೀಯ ಐಟಿ ಕಂಪೆನಿಗಳು ಭಾರೀ ನಷ್ಟವನ್ನು ಎದುರಿಸಲಿವೆಯೆಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕದ ಕಂಪೆನಿಗಳು ತಮ್ಮ ಕೆಲಸವನ್ನು ವಿದೇಶಿ ಕಂಪೆನಿಗಳಿಗೆ ಹೊರಗುತ್ತಿಗೆ ನೀಡಲು ಹಾಗೂ ವಿದೇಶಿ ಉದ್ಯೋಗಿಗಳು ಅಮೆರಿಕನ್ನರ ಉದ್ಯೋಗಗಳನ್ನು ಕಸಿದುಕೊಳ್ಳುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಮಸೂದೆಯನ್ನು ಮಂಡಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ಇನ್ನೊಂದು ಬೆಳವಣಿಗೆಯಲ್ಲಿ, ಸೆನೆಟರ್ ಶೆರೊಡ್ ಬ್ರೌನ್ ಅವರು ಸೆನೆಟ್‌ನಲ್ಲಿ ಎಚ್-1ಬಿ ಹಾಗೂ ಎಲ್-1 ವೀಸಾ ಸುಧಾರಣಾ ಕಾಯ್ದೆಯನ್ನು ಮಂಡಿಸುವುದಾಗಿ ಪ್ರಕಟಿಸಿದರು. ಈ ಕಾಯ್ದೆಯು ಎಚ್-1ಬಿ ಹಾಗೂ ಎಲ್-1 ವೀಸಾ ಕಾರ್ಯಕ್ರಮಗಳಲ್ಲಿ ಲೋಪದೋಷಗಳನ್ನು ನಿವಾರಿಸಲಿದೆ ಹಾಗೂ ಅಮೆರಿಕನ್ ಉದ್ಯೋಗಿಗಳು ಮತ್ತು ವೀಸಾ ಬಳಕೆದಾರರಿಗೆ ರಕ್ಷಣೆಯನ್ನು ನೀಡಲಿದೆಯೆಂದು ಅವರು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಮೆರಿಕನ್ನರಿಗೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದಿಂದ ಎಚ್-1ಬಿ ಅಥವಾ ಎಲ್-1 ವೀಸಾ ಕಾರ್ಯಕ್ರಮಗಳಲ್ಲಿ ಮಹತ್ವದ ಬದಲಾವಣೆೆಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರು.
ಎಚ್-1ಬಿ ವೀಸಾ ಹಾಗೂ ಎಲ್-1 ವೀಸಾ ಕಾರ್ಯಕ್ರಮದಲ್ಲಿ ನಡೆಯುವ ವಂಚನೆ ಹಾಗೂ ಕಿರುಕುಳಗಳ ಬಗ್ಗೆ ಆಂತರಿಕ ಭದ್ರತಾ ಇಲಾಖೆಯು ಕಣ್ಗಾವಲು ನಡೆಸಲಿದೆ. ವಿಧೇಯಕದ ಅವಶ್ಯಕತೆಗಳನ್ನು ಉಲ್ಲಂಘಿಸುವ ಕಂಪೆನಿಗಳಿಗೆ ಅವು ದಂಡವನ್ನು ವಿಧಿಸಲಿದೆ.