ಟ್ರೀ ಮ್ಯಾನ್ ಸಿಂಡ್ರೋಮ್ ನಿಂದ ಬಳಲುತ್ತಿದ್ದಾಳೆಯೇ ಈ ಬಾಂಗ್ಲಾ ಬಾಲಕಿ?
ಢಾಕಾ, ಫೆ.1: ಹತ್ತು ವರ್ಷದ ಸಹನಾ ಖಟೂನ್ ಳ ಮುಖದಲ್ಲಿ ಮರದ ತೊಗಟೆಯಂತಹ ಗಂಟುಗಳು ನಾಲ್ಕು ತಿಂಗಳುಗಳ ಹಿಂದೆ ಕಾಣಿಸಿಕೊಂಡಾಗ ಆಕೆಯ ತಂದೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅವುಗಳು ಹರಡಲಾರಂಭಿಸಿದಾಗ ಚಿಂತಾಕ್ರಾಂತರಾದ ಆಕೆಯ ತಂದೆ ಆಕೆಯನ್ನು ತಮ್ಮ ಗ್ರಾಮದಿಂದ ರಾಜಧಾನಿ ಢಾಕಾಗೆ ಚಿಕಿತ್ಸೆಗಾಗಿ ಕರೆತಂದಿದ್ದರು.
ಆಕೆಯನ್ನು ಪರೀಕ್ಷಿಸಿದ ವೈದ್ಯರು ‘‘ಟ್ರೀ ಮ್ಯಾನ್ ಸಿಂಡ್ರೋಮ್’ ನಿಂದ ಬಳಲುತ್ತಿರುವ ಪ್ರಥಮ ಹುಡುಗಿ ಆಕೆಯಾಗಿರಬಹುದೆಂದು ಶಂಕಿಸಿದ್ದಾರೆ. ಅವರ ಶಂಕೆ ನಿಜವಾಗಿದ್ದಲ್ಲಿ ಎಪಿಡರ್ಮೊಡಿಸ್ಪ್ಲೇಸಿಯ ವೆರ್ರುಸಿಫೊರ್ಮಿಸ್ ಎಂಬ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಜಗತ್ತಿನ ಕೆಲವೇ ಕೆಲವು ಜನರಲ್ಲಿ ಈಕೆಯೂ ಒಬ್ಬಳಾಗಲಿದ್ದಾಳೆ.
ಈ ಅನುವಂಶಿಕ ಕಾಯಿಲೆಯಲ್ಲಿ ದೇಹದ ಮೇಲೆ ಮುಖ್ಯವಾಗಿ ಕೈಕಾಲುಗಳಲ್ಲಿ ಅನೈಸರ್ಗಿಕ ಚರ್ಮದ ಬೆಳವಣಿಗೆಗಳಾಗುತ್ತವೆ. ಇಲ್ಲಿಯ ತನಕ ಕೇವಲ ಕೆಲವು ಪುರುಷರು ಮಾತ್ರ ವಿಶ್ವದಲ್ಲಿ ಈ ಕಾಯಿಲೆಗೆ ತುತ್ತಾಗಿದ್ದಾರೆ.
ಬಾಂಗ್ಲಾದೇಶದವನೇ ಆದ 27 ವರ್ಷದ ಅಬುಲ್ ಬಜಂದಾರ್ ಕೂಡ ಇಂತಹುದೇ ಸಮಸ್ಯೆಯಿಂದ ಬಳಲುತ್ತಿದ್ದು ಆತನ ಕೈಗಳಲ್ಲಿ5 ಕೆಜಿಯಷ್ಟು ತೂಕದ ಅನೈಸರ್ಗಿಕ ಬೆಳವಣಿಗೆಗಳಾಗಿದ್ದವು. ಆತನಿಗೆ ಇಲ್ಲಿಯ ತನಕ 16 ಶಸ್ತ್ರಚಿಕಿತ್ಸೆಗಳನ್ನು ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಾಡಲಾಗಿದ್ದುಆತ ಇನ್ನು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ.
ಇತ್ತ ಮುಹಮ್ಮದ್ ಶಾಹ್ ಜಹಾನ್ ತನ್ನ ಮಗಳು ಸಹನಾ ಕೂಡಾ ಇದೇ ಕಾಯಿಲೆಯಿಂದ ಬಳಲುತ್ತಿರಬಹುದು ಎಂದು ತಿಳಿದು ಗಾಬರಿಗೊಂಡಿದ್ದಾರೆ. ಅವರದು ಬಡ ಕುಟುಂಬವಾಗಿದ್ದು ಅವರ ಪತ್ನಿಯು ಸಹನಾ ಆರು ವರ್ಷದವಳಿರುವಾಗಲೇ ಮೃತಪಟ್ಟಿದ್ದಳು.
ವೈದ್ಯರ ಚಿಕಿತ್ಸೆಯಿಂದ ಆಕೆ ಮೊದಲಿನಂತಾಗಬಹುದು ಎಂಬ ಆತ್ಮವಿಶ್ವಾಸ ಸಹನಾಳ ತಂದೆಗಿದೆ. ವೈದ್ಯರು ಕೂಡ ಸಹನಾ ಅಷ್ಟೊಂದು ಗಂಭೀರ ಸಮಸ್ಯೆಯಿಂದ ಬಳಲುತ್ತಿರಲಿಕ್ಕಿಲ್ಲ ಎಂಬ ಆಶಾಭಾವನೆಯಲ್ಲಿದ್ದಾರೆ.