×
Ad

ನಾನು ಅಮೇರಿಕಕ್ಕೆ ಬಂದಿದ್ದು ನಿರಾಶ್ರಿತ ವಲಸಿಗನಾಗಿ: ಗೂಗಲ್ ಸಹಸ್ಥಾಪಕ ಬ್ರಿನ್

Update: 2017-02-01 13:14 IST

ವಾಷಿಂಗ್ಟನ್, ಫೆ.1: ''ನಾನು ಆರು ವರ್ಷದವನಿರುವಾಗ ನನ್ನ ಕುಟುಂಬದೊಂದಿಗೆ ನಿರಾಶ್ರಿತ ವಲಸಿಗನಾಗಿ ಅಮೇರಿಕಕ್ಕೆ ಬಂದಿದ್ದೆ'' ಎಂದು ಸೋಮವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಿತ ವಲಸಿಗರ ನಿಷೇಧ ನಿರ್ಧಾರವನ್ನು ವಿರೋಧಿಸಿ ರಸ್ತೆಗಿಳಿದು ಪ್ರತಿಭಟಿಸಿದ ಗೂಗಲ್ ಕಂಪೆನಿಯ ಸುಮಾರು 2000 ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡುತ್ತಾ ಗೂಗಲ್ ಸಹಸ್ಥಾಪಕ ಸರ್ಗೆ ಬ್ರಿನ್ ಹೇಳಿದರು.

''ಆಗ ಅಮೇರಿಕಾದ ಅತ್ಯಂತ ದೊಡ್ಡ ವೈರಿಯಾಗಿದ್ದ ಸೋವಿಯತ್ ಯೂನಿಯನ್ನಿನಿಂದ ನನ್ನ ಕುಟುಂಬ ಇಲ್ಲಿಗೆ ಬಂದಿತ್ತು. ಆಗ ಕಷ್ಟಕರ ಸನ್ನಿವೇಶವಿತ್ತು. ಶೀತಲ ಸಮರದ ಆ ದಿನಗಳಲ್ಲಿಯೂ ಅಮೆರಿಕಾ ನನ್ನ ಹಾಗೂ ನನ್ನ ಕುಟುಂಬವನ್ನು ನಿರಾಶ್ರಿತರಾಗಿ ತನ್ನಲ್ಲಿ ಸೇರಿಸಿಕೊಂಡಿತ್ತು,'' ಎಂದು ಅವರು ನೆನಪಿಸಿಕೊಂಡಿದ್ದಾರೆ.

''ಆ ದಿನಗಳಲ್ಲಿ ನಿರಾಶ್ರಿತರನ್ನು ಬರಮಾಡಿಕೊಳ್ಳುವುದರಲ್ಲಿ ಅಪಾಯವಿತ್ತು. ಆವರು ಗೂಢಚಾರಿಕೆ ನಡೆಸಬಹುದಾಗಿತ್ತು, ಅಣು ರಹಸ್ಯಗಳನ್ನು ತಿಳಿಯಬಹುದಾಗಿತ್ತು. ಇಂತಹ ಅನೇಕ ಪ್ರಕರಣಗಳೂ ನಡೆದಿದ್ದವು. ಇಂದು ನಾವು ಎದುರಿಸುತ್ತಿರುವ ಉಗ್ರವಾದ ಬೆದರಿಕೆಗಳಿಗಿಂತಲೂ ಹಿಂದಿನ ಸಮಸ್ಯೆಗಳುಗಂಭೀರವಾಗಿದ್ದವು. ಆದರೂ ನಮ್ಮಂಥವರನ್ನು ಸ್ವಾಗತಿಸುವಲ್ಲಿ ಈ ದೇಶ ಧೈರ್ಯ ತೋರಿತ್ತು. ಆ ದಿನ ನಮಗೆ ಈ ದೇಶಕ್ಕೆ ಪ್ರವೇಶವಿಲ್ಲದೇ ಹೋಗಿದ್ದರೆ, ಇಂದು ನಾನೇನಾಗಿದ್ದೆನೋ ಅದಾಗುತ್ತಿರಲಿಲ್ಲ,''ಎಂದು ಅವರು ಭಾವಪರವಶರಾಗಿ ನುಡಿದರು.
ಈಗಾಗಲೇ ಟ್ರಂಪ್ ನೀತಿಯನ್ನು ಟೀಕಿಸಿರುವ ಗೂಗಲ್ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ಕೂಡ ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡಿದ್ದರು.

ಸಭೆಯ ಪ್ರಧಾನ ಭಾಷಣವನ್ನು ಗೂಗಲ್ ಪ್ರಾಡಕ್ಟ್ ಮ್ಯಾನೇಜರ್‌ಹಾಗೂ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಹಳೆ ವಿದ್ಯಾರ್ಥಿನಿ ಸೋಫಿ ಎಸ್ಮಾಯಿಲ್ಝಡೇಹ್ ಅವರು ನೀಡಿದರು. ಇರಾನ್ ಮೂಲದ ಕೆನಡಿಯನ್ ನಾಗರಿಕಳಾಗಿರುವ ಈಕೆ ಅಮೆರಿಕಾದಲ್ಲಿ ಕಳೆದ 15 ವರ್ಷಗಳಿಂದ ವಾಸಿಸುತ್ತಿದ್ದಾರೆ. ಟ್ರಂಪ್ ಆದೇಶ ಹೊರಬಿದ್ದಾಗ ಸ್ವಿಝರ್ಲೆಂಡಿನಲ್ಲಿದ್ದ ಆಕೆಯನ್ನು ಫೆಡರಲ್ ಕೋರ್ಟ್ ಟ್ರಂಪ್ ಆದೇಶಕ್ಕೆ ತುರ್ತು ತಡೆ ಹೇರಿದ ಸಂದರ್ಭ ಕೂಡಲೇ ಅಮೆರಿಕಾಕ್ಕೆ ಹಿಂದಕ್ಕೆ ಕರೆತರಲಾಗಿತ್ತು. ಟ್ರಂಪ್ ಆದೇಶದಿಂದ ಆಕೆಗೆ ಕಷ್ಟ ಎದುರಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News