ಯುಎಇ: ಅನಧಿಕೃತ ಆನ್ ಲೈನ್ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ
ದುಬೈ,ಫೆ.1: ವೆಬ್‌ಸೈಟ್‌ಗಳಲ್ಲಿ ,ಫೇಸ್‌ಬುಕ್ ವಾಟ್ಸ್‌ಆಪ್, ಇನ್ಸ್‌ಟಾಗ್ರಾಂ ಮುಂತಾದ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಅನಧಿಕೃತ ಆನ್‌ಲೈನ್ ವ್ಯಾಪಾರ ನಡೆಸುವವರ ವಿರುದ್ಧ ದುಬೈ ನಗರಸಭೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ವೆಬ್‌ಸೈಟ್ ನಿಷೇಧ ಸಹಿತ ಬಲವಾದ ಶಿಕ್ಷಾ ಕ್ರಮಗಳನ್ನು ನಾವು ಚಿಂತಿಸುತ್ತಿದ್ದೇವೆ ಎಂದು ನಗರ ಸಭಾ ಆರೋಗ್ಯ ಸುರಕ್ಷಾ ಇಲಾಖೆ ನಿರ್ದೇಶಕ ರೆಧ ಹಸನ್ ಸಲ್ಮಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಫೆಡರಲ್ ಅಧಿಕಾರಿಗಳ ನೆರವಿನಲ್ಲಿ ಇಂತಹವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಯುಎಇಯಲ್ಲಿ ಯಾವುದೇ ರೀತಿಯ ವ್ಯಾಪಾರಕ್ಕೂ ಕಾನೂನಾತ್ಮಕ ಅನುಮತಿ ಇರಬೇಕು. ಆನ್‌ಲೈನ್‌ನ ಮೂಲಕ ಅನಧಿಕೃತ ವ್ಯಾಪಾರ ಬಹುದೊಡ್ಡ ಜನವಿಭಾಗವನ್ನು ಆಕರ್ಷಿಸುತ್ತದೆ. ಆದ್ದರಿಂದ ಇದು ಕ್ರಿಮಿನಲ್ ಅಪರಾಧದ ಸಾಲಿಗೆ ಸೇರುತ್ತದೆ ಎಂದು ರೆಧ ಹಸನ್ ಹೇಳಿದ್ದಾರೆ. ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳನ್ನು ಕೂಡಾ ಆನ್‌ಲೈನ್ ಮುಖಾಂತರ ಮಾರಲಾಗುತ್ತಿದೆ. ಸೌಂದರ್ಯವರ್ಧಕ ವಸ್ತುಗಳು ಮತ್ತು ವ್ಯಕ್ತಿ ಶುಚಿತ್ವ ಉತ್ಪನ್ನಗಳ ಕುರಿತು ಬಳಕೆದಾರರು ಜಾಗೃತೆ ವಹಿಸಬೇಕಾಗಿದೆ ಎಂದು ಅವರು ಜನರಿಗೆ ಕರೆ ನೀಡಿದ್ದಾರೆಂದು ವರದಿ ಯಾಗಿದೆ.