ರೈತರು, ಯುವಜನರನ್ನು ಮರೆತ ಬಜೆಟ್ : ಶಿವಸೇನೆ ಟೀಕೆ

Update: 2017-02-01 14:19 GMT

  ಮುಂಬೈ, ಫೆ.1: ಕೇಂದ್ರ ಸರಕಾರದ ಬಜೆಟ್ ಸಂಬಳ ಪಡೆಯುವ ವರ್ಗದವರಿಗೆ ಸಮಾಧಾನ ತಂದಿದ್ದರೂ, ಬಜೆಟ್ ರೈತರು, ಯುವಜನರು ಮತ್ತು ಹಿರಿಯ ನಾಗರಿಕರನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆ ಎಂದು ಶಿವಸೇನೆಯ ಸಂಸದ ಅರವಿಂದ್ ಸಾವಂತ್ ಟೀಕಿಸಿದ್ದಾರೆ.

ಗ್ರಾಮೀಣ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು, ಕೌಶಲ್ಯ ತರಬೇತಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ಮುಂದುವರಿಯಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲೀ ಘೋಷಿಸಿದ್ದರೂ, ಪ್ರಸ್ತುತ ಕೇಂದ್ರ ಸರಕಾರದ ಅವಧಿಯಲ್ಲಿ ಈ ಕ್ಷೇತ್ರವು ದಯನೀಯ ವೈಫಲ್ಯ ಕಂಡಿದೆ ಎಂದು ಸಾವಂತ್ ಹೇಳಿದ್ದಾರೆ.

 ಅರ್ಹ ಮನೆಗಳಿಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂಬ ಜೇಟ್ಲೀ ಹೇಳಿಕೆ ಉಲ್ಲೇಖಿಸಿದ ಅವರು, ಇದುವರೆಗೆ ಎಷ್ಟು ಇಂತಹ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದರು. ಬಡವರಿಗೆ ಮನೆ ಯೋಜನೆ ಎಂದು ಘೋಷಿಸಲಾಗಿದೆ. ಆದರೆ ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ನಿಜವಾಗಿ ಎಷ್ಟು ಮನೆಗಳನ್ನು ಬಡವರಿಗಾಗಿ ನಿರ್ಮಿಸಲಾಗಿದೆ ಎಂದು ಸರಕಾರ ತಿಳಿಸಬೇಕು. ಕೆಲವೆಡೆ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಇವನ್ನು ಹಸ್ತಾಂತರಿಸಲಾಗಿಲ್ಲ ಎಂದರು. ನೀರಿನ ಸಮಸ್ಯೆ ಪರಿಹರಿಸದ ಹೊರತು ಶೌಚಾಲಯ ಯೋಜನೆಗೆ ಅರ್ಥವಿಲ್ಲ. ಇಂದಿಗೂ ಮಹಿಳೆಯರು, ಮಕ್ಕಳ ಸಹಿತ ಜನತೆ ಬಯಲಿನಲ್ಲೇ ಶೌಚ ನಡೆಸುವ ಪರಿಸ್ಥಿತಿಯಿದೆ. ಇದಕ್ಕೆ ಕಾರಣ ನೀರಿನ ಸಮಸ್ಯೆ. ಮೊದಲು ನೀರಿನ ಸಮಸ್ಯೆ ಪರಿಹರಿಸಿ ಎಂದವರು ಸರಕಾರವನ್ನು ಆಗ್ರಹಿಸಿದರು.

ರೈಲ್ವೇ ಬಜೆಟ್‌ನಲ್ಲಿ ಏನು ಘೋಷಿಸಿದ್ದಾರೆ ಎಂಬುದನ್ನು ನಾವಿನ್ನೂ ಗಮನಿಸಿಲ್ಲ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News