×
Ad

ಇರಾನ್ ಕ್ಷಿಪಣಿ ಉಡಾವಣೆ: ಟ್ರಂಪ್‌ಗೆ ಮೊದಲ ಪರೀಕ್ಷೆ

Update: 2017-02-01 21:53 IST

ವಾಷಿಂಗ್ಟನ್, ಫೆ. 1: ಭಾನುವಾರ ಇರಾನ್ ಸಿಡಿತಲೆ ಕ್ಷಿಪಣಿ ಉಡಾಯಿಸಿರುವುದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಮೊದಲ ಲಿಟ್ಮಸ್ ಪರೀಕ್ಷೆಯಾಗಿ ಪರಿಣಮಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಅಧ್ಯಕ್ಷರಾದ ಕೇವಲ ಒಂಬತ್ತೇ ದಿನಗಳಲ್ಲಿ ಈ ಕ್ಷಿಪಣಿ ಉಡಾಯಿಸಲಾಗಿದ್ದು, ಹೊಸ ಆಡಳಿತ ಇದಕ್ಕೆ ಹೇಗೆ ಸ್ಪಂದಿಸುತ್ತದೆ ಎನ್ನುವ ಬಗ್ಗೆ ಇರಾನ್ ಪರಿಸ್ಥಿತಿಗಳನ್ನು ಅವಲೋಕಿಸುತ್ತಿರುವವರು ಎದುರು ನೋಡುತ್ತಿದ್ದಾರೆ.

ಹೆಚ್ಚು ಆಕ್ರಮಣಶೀಲ ಕ್ರಮವು ತಿರುಗುಬಾಣವಾಗುವ ಅಪಾಯವಿದೆ ಹಾಗೂ ಗಲ್ಫ್ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಡಲು ಇದು ಕಾರಣವಾಗಲಿದೆ ಎಂದು ತಜ್ಞರು ಅಂದಾಜು ಮಾಡುತ್ತಾರೆ.

ಅಮೆರಿಕದ ರಕ್ಷಣಾ ಅಧಿಕಾರಿಗಳ ಪ್ರಕಾರ, ಇರಾನ್ ಮಧ್ಯಮ ದೂರಸಾಮರ್ಥ್ಯದ ಸಿಡಿತಲೆ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು, ಟ್ರಂಪ್ ಜನವರಿ 20ರಂದು ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಪರೀಕ್ಷೆ ಇದಾಗಿದೆ. ಸೆಮ್‌ನನ್‌ನ ಹೊರವಲಯದ ಉಡಾವಣಾ ಕೇಂದ್ರದಲ್ಲಿ ಈ ಪರೀಕ್ಷೆ ನಡೆದಿದೆ. ಆದರೆ ಈ ಪರೀಕ್ಷೆ ವಿಫಲವಾಗಿದೆ. 500 ಮೈಲು ದೂರ ಕ್ರಮಿಸಿದ ಈ ಕ್ಷಿಪಣಿ ಭಸ್ಮವಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ಇರಾಕ್ ಕಟ್ಟಕಡೆಯದಾಗಿ ಒಬಾಮ ಆಡಳಿತದ ಅವಧಿಯಲ್ಲಿ ಅಂದರೆ 2016ರ ಜುಲೈನಲ್ಲಿ ಇಂಥ ಪರೀಕ್ಷೆ ಕೈಗೊಂಡಿತ್ತು. ಆದರೆ ಇದರಲ್ಲಿ ಅಣುಒಪ್ಪಂದ ಉಲ್ಲಂಘಿಸುವ ಯಾವ ಅಂಶವೂ ಇಲ್ಲ ಎಂಬ ಕಾರಣಕ್ಕೆ ಅಧ್ಯಕ್ಷರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News