ಟ್ರಂಪ್ ವಲಸೆ ಆದೇಶ ಪ್ರಶ್ನಿಸಲು ಟೆಕ್ಕಿಗಳ ನಿರ್ಧಾರ
ವಾಷಿಂಗ್ಟನ್, ಫೆ. 1: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರದೇಶಗಳಿಂದ ಬಂದ ನಿರಾಶ್ರಿತರನ್ನು ಹಾಗೂ ಮುಸ್ಲಿಮರನ್ನು ಅಮೆರಿಕ ನೆಲದಿಂದ ಹೊರಹಾಕುವ ಬಗ್ಗೆ ಕೈಗೊಂಡಿರುವ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅಮೆರಿಕದ ತಂತ್ರಜ್ಞಾನ ಘಟಕಗಳ ವಿಸ್ತೃತ ಒಕ್ಕೂಟ ನಿರ್ಧರಿಸಿದೆ.
ಈ ವಲಯದ 20ಕ್ಕೂ ಹೆಚ್ಚು ಘಟಕಗಳು ಈ ಸಂಬಂಧದ ಕಾನೂನು ಸಾಧ್ಯತೆಗಳನ್ನು ಪರಿಶೀಲಿಸಲು ಕರೆದಿರುವ ಸಭೆಯಲ್ಲಿ ಹಾಜರಾಗುವ ನಿರೀಕ್ಷೆ ಇದೆ. ಟ್ರಂಪ್ ಆದೇಶ ಸಿಲಿಕಾನ್ ವ್ಯಾಲಿ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ. ಏಕೆಂದರೆ ಇಲ್ಲಿನ ಹಲವು ಘಟಕಗಳು ಸಾವಿರಾರು ಮಂದಿ ಬೇರೆ ದೇಶದ ಪ್ರಜೆಗಳನ್ನು ನೇಮಕ ಮಾಡಿಕೊಂಡಿವೆ.
"ಇದು ಇನ್ನೂ ತೀರಾ ಆರಂಭಿಕ ಹಂತ. ಆದರೆ ಕಾರ್ಯತಂತ್ರ ಮಾತ್ರ ಬೆರ್ನಾರ್ಡಿನೊ ಐಫೋನ್ ಬ್ರೀಫ್‌ಗೆ ಸಮಾನವಾದದ್ದು" ಎಂದು ಉನ್ನತ ಮೂಲಗಳು ಹೇಳಿವೆ. ಆಪಲ್ ಸಂಸ್ಥೆಯ ಐಫೋನ್ ಸೆಕ್ಯುರಿಟಿ ಲಕ್ಷಣಗಳನ್ನು ಹ್ಯಾಂಡ್‌ಸೆಟ್‌ಗಳಲ್ಲಿ ದುರ್ಬಲಗೊಳಿಸುವಂತೆ ಅಮೆರಿಕ ಸರಕಾರ ಮಾಡಿದ ಆದೇಶದ ವಿರುದ್ಧ ಟೆಕ್ ಕಂಪೆನಿಗಳು ಒಗ್ಗೂಡಿ ಹೋರಾಟ ನಡೆಸಿದ್ದವು.
ಗೂಗಲ್‌ನ ಪೋಷಕ ಸಂಸ್ಥೆಯಾದ ಅಲ್ಫಾಬೆಟ್, ನೆಟ್‌ಫ್ಲಿಕ್ಸ್, ಏರ್ಬ್‌ನಬ್ ಹಾಗೂ ಟ್ವಿಟ್ಟರ್ ಈ ಮಾತುಕತೆಯಲ್ಲಿ ಭಾಗವಹಿಸಿವೆ ಎಂದು ತಿಳಿದುಬಂದಿದೆ. ಅಡೋಬ್ ಸಿಸ್ಟಮ್ಸ್, ಡ್ರಾಪ್‌ಬಾಕ್ಸ್, ಎಸ್ಟಿ, ಮೊಝಿಲ್ಲಾ, ಪಿಂಟ್ರೆಸ್ಟ್, ರೆಡಿಟ್, ಸೇಲ್ಸ್‌ಫೋರ್ಸ್, ಯೆಲ್ಪ್, ಸ್ಪೇಸ್‌ಎಕ್ಸ್ ಹಾಗೂ ಝೀಂಗಾ ಕೂಡಾ ಮಾತುಕತೆಗೆ ಒಲವು ತೋರಿವೆ ಎನ್ನಲಾಗಿದೆ.