5 ದೇಶಗಳಿಗೆ ವೀಸಾ ನಿಷೇಧ: ಸ್ಪಷ್ಟೀಕರಣ ನೀಡಿದ ಕುವೈಟ್
ಕುವೈಟ್ ಸಿಟಿ, ಫೆ. 3: ಕುವೈಟ್ ಐದು ರಾಷ್ಟ್ರಗಳಿಗೆ ವೀಸಾ ನಿಷೇಧ ಹೇರಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿರುವ ಸುದ್ದಿಯಲ್ಲಿ ಹೊಸ ವಿಶೇಷವೇನಿಲ್ಲ. ಕುವೈಟ್ 2011ರಿಂದಲೇ ಆರು ದೇಶಗಳಿಗೆ ವೀಸಾ ನೀಡುವುದರಲ್ಲಿ ನಿಯಂತ್ರಣವನ್ನು ಹೇರಿದೆ. ಸಿರಿಯ ಇರಾಕ್,ಇರಾನ್, ಪಾಕಿಸ್ತಾನ್, ಅಫ್ಘಾನಿಸ್ತಾನ,ಯಮನ್ ರಾಷ್ಟ್ರೀಯರಿಗೆ ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ವೀಸಾ ನಿಯಂತ್ರಣ ಹೇರಲಾಗಿದೆ. ಆದರೆ ಇದು ಸಂಪೂರ್ಣ ವೀಸಾ ನಿಷೇಧವಲ್ಲ. ಗೃಹಸಚಿವಾಲಯದ ವಿಶೇಷ ಅನುಮತಿ ಪಡೆದು ಈ ದೇಶದ ಜನರಿಗೆ ಕುವೈಟ್ ಪ್ರವೇಶಕ್ಕೆ ವೀಸಾ ನೀಡಲಾಗುತ್ತಿದೆ ಎಂದು ಕುವೈಟ್ ಸರಕಾರದ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಮಲಯಾಳಂ ದೈನಿಕ ಮಾಧ್ಯಮಂ ವರದಿ ಮಾಡಿದೆ.
ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಿದೇಶ ನೀತಿಯನ್ನು ಅನುಸರಿಸಿ ಜಿ.ಸಿ.ಸಿ.ದೇಶವಾದ ಕುವೈಟ್ ಐದು ಮುಸ್ಲಿಮ್ ರಾಷ್ಟ್ರಗಳಿಗೆ ವೀಸಾ ನಿಷೇಧಿಸಿದೆ ಎನ್ನುವ ರೀತಿಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.ಯಮನ್‌ನನ್ನು ಉದ್ಧರಿಸದೆ ವರದಿಯಾಗಿವೆ. ಈ ದೇಶಗಳಲ್ಲಿ ನೆಲೆಸಿರುವ ರಾಜಕೀಯ ಅಸ್ಥಿರತೆ ಸರಿಯಾದರೆ ವೀಸಾ ನಿಷೇಧವನ್ನು ಹಿಂಪಡೆಯಲಾಗುವುದು ಎಂದು ಕುವೈಟ್ ಹೇಳಿತ್ತು. ಇವುಗಳಲ್ಲಿ ಪಾಕಿಸ್ತಾನ , ಇರಾಕ್‌ಗಳ ವೀಸಾ ನಿಯಂತ್ರಣವನ್ನು ಇತ್ತೀಚೆಗೆ ಸರಳಗೊಳಿಸಲಾಗಿದೆ.
ಪಾಕಿಸ್ತಾನ, ಇರಾನ್‌ನ ಹಲವಾರು ಪ್ರಜೆಗಳು ಈಗಲೂ ಕುವೈಟ್‌ನಲ್ಲಿ ದುಡಿಯುತ್ತಿದ್ದಾರೆ. ಇವರಿಗೆ ಇಲ್ಲಿ ಕೆಲಸ ಮಾಡುವುದಕ್ಕೋ ಊರಿಗೆ ಹೋಗಿ ಮರಳಿ ಬರುವುದಕ್ಕೋ ಯಾವುದೇ ಸಮಸ್ಯೆಗಳಿಲ್ಲ. ರಾಜಕೀಯ ಅರಾಜಕತೆ ಮತ್ತು ಅಸ್ಥಿರತೆಗಳನ್ನು ಲೆಕ್ಕಿಸಿ ಈ ಕಾರಣದಿಂದ ಸಿರಿಯನ್ನರಿಗೆ ವೀಸಾ ನೀಡುವುದರಲ್ಲಿ ಸ್ವಲ್ಪ ಹೆಚ್ಚು ಬಿಗು ನಿಲುವನ್ನು ಹೊಂದಿದೆ.ಆದರೆ ಬಹಳಷ್ಟು ಸಿರಿಯನ್ನರು ಕುವೈಟ್‌ನಲ್ಲಿ ಈಗಲೂ ದುಡಿಯುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಿದೇಶ ನೀತಿಯ ಹೆಜ್ಜೆ ಅನುಸರಿಸಿ ಕುವೈಟ್ ಐದು ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ನಿಷೇಧ ವಿಧಿಸಿದೆ.ಇದೊಂದು ಹೊಸ ಘಟನೆಯೆಂಬಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.
ಕುವೈಟ್ ಕೇವಲ ಮುಸ್ಲಿಂ ದೇಶಗಳಿಗೆ ಮಾತ್ರ ವೀಸಾ ನಿಯಂತ್ರಣ ಹೇರಿದ್ದಲ್ಲ. ಅದು ಇಸ್ರೇಲ್ ಪ್ರಜೆಗಳಿಗೂ ಕುವೈಟ್ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಮಾತ್ರವಲ್ಲ ಇಸ್ರೇಲ್‌ನೊಂದಿಗಿನ ಎಲ್ಲಾ ವ್ಯವಹಾರಗಳನ್ನು ಕುವೈಟ್ ಸ್ಥಗಿತಗೊಳಿಸಿದೆ. ಈ ಹಿಂದೆ ಇಸ್ರೇಲ್ ಪ್ರಯಾಣಿಕರಿಗೆ ವಿಮಾನದಲ್ಲಿ ಸೀಟು ಒದಗಿಸಬೇಕೆಂದು ಅಮೆರಿಕ ಬೇಡಿಕೆ ಇಟ್ಟಾಗ ಅದಕ್ಕೊಪ್ಪದೆ ಕುವೈಟ್‌ನ ರಾಷ್ಟ್ರೀಯ ವಿಮಾನ ಕಂಪೆನಿಗಳು ತನ್ನ ನ್ಯೂಯಾರ್ಕ್,ಲಂಡನ್ ಸರ್ವೀಸನ್ನೇ ಸ್ಥಗಿತಗೊಳಿಸಿವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.