ಸೊಸೆ ಮಗಳಾಗಲು ಸಾಧ್ಯವಿಲ್ಲ ಎನ್ನುತ್ತಾರೆ. ನನ್ನ ಸೊಸೆ ನೂರಿ ನನ್ನ ಮಗನಾದಳು !

Update: 2017-02-03 10:31 GMT

ನನ್ನ ಸೊಸೆ ಎರಡು ತಿಂಗಳ ಹಿಂದೆ ದೇವರ ಪಾದ ಸೇರಿದ್ದಾಳೆ. ಆಕೆ ನನ್ನ ಮಗನಿಗಿಂತ ಹೆಚ್ಚು ಎತ್ತರ ಮತ್ತು ಹೆಚ್ಚು ಆರೋಗ್ಯವಂತಳಾಗಿದ್ದಳು, ಹೀಗಾಗಿ ಪ್ರತಿಯೊಬ್ಬರೂ ಆಕೆಯನ್ನು ತಮಾಷೆ ಮಾಡುತ್ತಿದ್ದರು. ಕುಹಕಿಗಳು ಏನೇ ಹೇಳಲಿ...ಅಂತಿಮವಾಗಿ ಅವಳು ನಮ್ಮ ಮನೆಯ ಮಗಳಾಗಿದ್ದಳು. ಇತರ ಸೊಸೆಯರ ಎದುರಿಗೆ ನೂರಿಜಾಳನ್ನು ಹೆಚ್ಚು ಹೊಗಳದಂತೆ ನನ್ನ ಪತ್ನಿ ಆಗಾಗ್ಗೆ ಉಪದೇಶ ಮಾಡುತ್ತಲೇ ಇದ್ದಳು.

ಆದರೆ ನೂರಿಜಾ ಇತರರಿಗಿಂತ ಭಿನ್ನಳಾಗಿದ್ದಳು,ಅವಳ ದಯಾಗುಣವನ್ನು ನಾನು ಹೇಗೆ ಹೊಗಳದಿರಲಿ? ಹೀಗಾಗಿ ಅವಳ ಬಗ್ಗೆ ಪ್ರತಿಯೊಬ್ಬರಿಗೂ ಹೊಟ್ಟೆಕಿಚ್ಚಿತ್ತು. ನಾನು ಮತ್ತು ನನ್ನ ಪತ್ನಿ ಅವಳನ್ನು ನೂರಿ ಎಂದೇ ಕರೆಯುತ್ತಿದ್ದೆವು.

ನನ್ನ ಮಕ್ಕಳಿಗೆ ಆಸ್ತಿ ಪಾಲು ಮಾಡಿಕೊಟ್ಟ ಬಳಿಕ ನನ್ನ ಬಳಿ ನನ್ನ ಹಜ್ ಯಾತ್ರೆಗೆ ಸಾಕಾಗುವಷ್ಟು ಹಣ ಮಾತ್ರ ಉಳಿದುಕೊಂಡಿತ್ತು. ನನ್ನ ಪತ್ನಿಯ ಯಾತ್ರೆಯ ಖರ್ಚು ಭರಿಸಲು ನನ್ನಿಂದ ಸಾಧ್ಯವಿರಲಿಲ್ಲ. ನನ್ನ ಪತ್ನಿ ಮಕ್ಕಳ ಬಳಿ ಹಣ ಕೇಳಿದಾಗ ಅಂಧ ತಾಯಿಯನ್ನು ಹಜ್‌ಗೆ ಕಳುಹಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ನುಣುಚಿಕೊಂಡಿದ್ದರು.

  ನನ್ನ ಪತ್ನಿ ಹಲವು ವರ್ಷಗಳ ಹಿಂದೆಯೇ ತನ್ನ ದೃಷ್ಟಿ ಕಳೆದುಕೊಂಡಿದ್ದಳು. ನಾನು ಹಜ್‌ಗೆ ತಯಾರಿ ನಡೆಸುತ್ತಿದ್ದಾಗ ಬಹಳಷ್ಟು ದಿನ ಆಕೆ ಕಣ್ಣೀರು ಹಾಕುತ್ತಿದ್ದುದನ್ನು ಕಂಡಿದ್ದೇನೆ. ಅದೊಂದು ದಿನ ಬಾಗಿಲ ಪರದೆಯ ಹಿಂದೆ ನಿಂತಿದ್ದ ನೂರಿ ಎಲ್ಲರನ್ನೂ ಕರೆದು ಪಾರ್ಸೆಲ್‌ವೊಂದನ್ನು ನನ್ನ ಹಿರಿಯ ಮಗನ ಕೈಗೆ ನೀಡಿದ್ದಳು. ನೂರಿ ತನ್ನ ಚಿನ್ನವನ್ನು ಮಾರಿದ್ದಳು, ಜೊತೆಗೆ ತನ್ನ ಹೆತ್ತವರ ಆಸ್ತಿಯಿಂದ ಬಂದಿದ್ದ ಹಣವನ್ನೂ ಸೇರಿಸಿದ್ದಳು.

ನನ್ನ ಜೊತೆಗೆ ನನ್ನ ಪತ್ನಿಯ ಮತ್ತು ತನ್ನ ಹಜ್ ಯಾತ್ರೆಗೆ ವ್ಯವಸ್ಥೆ ಮಾಡುವಂತೆ ಆಕೆ ನನ್ನ ಮಗನನ್ನು ಕೋರಿಕೊಂಡಿದ್ದಳು. ಅಲ್ಲಿದ್ದವರ ಪೈಕಿ ಯಾರ ಬಾಯಿಯಿಂದಲೂ ಕೃತಜ್ಞತೆಯ ಒಂದೇ ಒಂದು ಶಬ್ದ ಹೊರಬಿದ್ದಿರಲಿಲ್ಲ. ನನ್ನ ಅಂಧ ಪತ್ನಿ ಮಾತ್ರ ಕಂಬನಿ ಮಿಡಿಯುತ್ತಿದ್ದಳು.

ಜನರು ಹೇಳುತ್ತಾರೆ...ಸೊಸೆ ಎಂದೂ ಮಗಳಾಗಲು ಸಾಧ್ಯವಿಲ್ಲ ಎಂದು. ನೂರಿ ನನ್ನ ಮಗಳಾಗಲಿಲ್ಲ, ಆದರೆ ಅವಳು ನಮ್ಮ ಮಗನಾದಳು. ಹಜ್ ಯಾತ್ರೆಯಲ್ಲಿ ಧಾರ್ಮಿಕ ವಿಧಿಗಳನ್ನು ಪೂರೈಸುವಾಗ ಆಕೆ ನನ್ನ ಪತ್ನಿಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡೇ ನಡೆದಿದ್ದಳು. ನನ್ನ ಪತ್ನಿ ನೂರಿಯನ್ನು ಮಗುವಿನಂತೆ ತಬ್ಬಿಕೊಂಡಿದ್ದರೆ ಹಿಂದಿನಿಂದ ನಡೆಯುತ್ತಿದ್ದ ನನಗೆ ಕಣ್ಣು ತುಂಬಿ ಬಂದು ರಸ್ತೆಯೇ ಕಾಣುತ್ತಿರಲಿಲ್ಲ.

ಹಜ್‌ನಿಂದ ವಾಪಸ್ ಬಂದ ಬೆನ್ನಿಗೇ 2004ರಲ್ಲಿ ನನ್ನ ಪತ್ನಿ ನಿಧನಳಾಗಿದ್ದಳು. ಅಲ್ಲಾಹು ನಮ್ಮ ಪ್ರಾರ್ಥನೆಗಳನ್ನು ಒಪ್ಪಿಕೊಂಡಿದ್ದಾರೆಯೇ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನನ್ನ ಕೊನೆಯುಸಿರಿರುವವರೆಗೂ ನನ್ನ ಪ್ರಾರ್ಥನೆಗಳಲ್ಲಿ ನನ್ನ ಸೊಸೆಯಿರುತ್ತಾಳೆ ಮತ್ತು ಸ್ವರ್ಗದಲ್ಲಿ ನಮ್ಮ ನೂರಿಗೆ ಅತ್ಯುತ್ತಮ ಸ್ಥಳವನ್ನು ನೀಡುವಂತೆ ನಾನು ಅಲ್ಲಾಹುವನ್ನು ಬೇಡುತ್ತಲೇ ಇರುತ್ತೇನೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News