ಧಾರ್ಮಿಕ ಸ್ವಾತಂತ್ರ ರಕ್ಷಣೆಗೆ ಸರ್ವ ಕ್ರಮ: ಟ್ರಂಪ್
ವಾಶಿಂಗ್ಟನ್, ಫೆ. 3: ತನ್ನ ‘ಮುಸ್ಲಿಮ್ ನಿಷೇಧ’ ನೀತಿಗೆ ರಾಜಕೀಯ ಎದುರಾಳಿಗಳು ವ್ಯಕ್ತಪಡಿಸಿರುವ ವಿರೋಧಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಧಾರ್ಮಿಕ ಸ್ವಾತಂತ್ರವನ್ನು ರಕ್ಷಿಸಲು ತನ್ನ ಸರಕಾರವು ತನಗೆ ಲಭ್ಯವಿರುವ ಎಲ್ಲ ಅಧಿಕಾರಗಳನ್ನು ಬಳಸುವುದು ಎಂದು ಹೇಳಿದ್ದಾರೆ.
ಅಮೆರಿಕವು ಸಹಿಷ್ಣು ಸಮಾಜವಾಗಿ ಉಳಿಯುತ್ತದೆ ಹಾಗೂ ಅಲ್ಲಿ ಎಲ್ಲ ಧರ್ಮಗಳನ್ನು ಗೌರವಿಸಲಾಗುತ್ತದೆ ಎಂದರು.
‘‘ಅಮೆರಿಕವು ಯಾವತ್ತೂ ಸಹಿಷ್ಣು ಸಮಾಜವಾಗಿ ಉಳಿಯಬೇಕು. ಅಲ್ಲಿ ಧರ್ಮಗಳೂ ಗೌರವಿಸಲ್ಪಡಬೇಕು ಹಾಗೂ ನಮ್ಮ ಎಲ್ಲ ನಾಗರಿಕರು ಸುರಕ್ಷತೆಯ ಭಾವನೆ ಹೊಂದಿರಬೇಕು’’ ಎಂದು ಟ್ರಂಪ್ ಹೇಳಿದರು.
ಧಾರ್ಮಿಕ ಸ್ವಾತಂತ್ರಕ್ಕೆ ಭಯೋತ್ಪಾದನೆ ಮೂಲಭೂತ ಬೆದರಿಕೆಯಾಗಿದೆ ಎಂದು ಹೇಳಿದ ಅಮೆರಿಕದ ಅಧ್ಯಕ್ಷ, ‘‘ಭಯೋತ್ಪಾದನೆಯನ್ನು ನಿಲ್ಲಿಸಬೇಕು ಹಾಗೂ ಅದನ್ನು ನಿಲ್ಲಿಸಲಾಗುವುದು. ಸ್ವಲ್ಪ ಸಮಯ ಪರಿಸ್ಥಿತಿ ಚೆನ್ನಾಗಿರದು. ಆದರೆ, ಅದನ್ನು ಕೊನೆಗೂ ನಿಲ್ಲಿಸಲಾಗುವುದು’’ ಎಂದು ವಾರ್ಷಿಕ ‘ನ್ಯಾಶನಲ್ ಪ್ರೇಯರ್ ಬ್ರೇಕ್‌ಫಾಸ್ಟ್’ನಲ್ಲಿ ಮಾತನಾಡಿದ ಟ್ರಂಪ್ ನುಡಿದರು.
‘‘ನಮ್ಮ ದೇಶವು ಜಗತ್ತಿನಲ್ಲೇ ಅತ್ಯಂತ ಉದಾರ ವಲಸೆ ವ್ಯವಸ್ಥೆಯನ್ನು ಹೊಂದಿದೆ. ಆದರೆ, ನಮ್ಮ ಔದಾರ್ಯವನ್ನು ದುರುಪಯೋಗಪಡಿಸುವವರು ಇದ್ದಾರೆ. ನಮಗೆ ಭದ್ರತೆ ಬೇಕು’’ ಎಂದರು.
ಇರಾನ್, ಇರಾಕ್, ಯಮನ್, ಸುಡಾನ್, ಸಿರಿಯ, ಲಿಬಿಯ ಮತ್ತು ಸೊಮಾಲಿಯ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸುವ ಟ್ರಂಪ್ ಆದೇಶ ಜಾಗತಿಕವಾಗಿ ಭಾರೀ ವಿವಾದದ ಅಲೆಗಳನ್ನು ಸೃಷ್ಟಿಸಿರುವುದನ್ನು ಸ್ಮರಿಸಬಹುದಾಗಿದೆ.