ಟ್ರಂಪ್ ಎಚ್ಚರಿಕೆಯನ್ನು ತಿರಸ್ಕರಿಸಿದ ಇರಾನ್
ಟೆಹರಾನ್ (ಇರಾನ್), ಫೆ. 3: ತನ್ನ ಇತ್ತೀಚಿನ ಕ್ಷಿಪಣಿ ಪರೀಕ್ಷೆಯ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆಗೆ ಯಾವುದೇ ಆಧಾರವಿಲ್ಲ ಹಾಗೂ ಅದು ‘ಪ್ರಚೋದನಾತ್ಮಕ’ ಕ್ರಮವಾಗಿದೆ ಎಂದು ಇರಾನ್ ಗುರುವಾರ ಹೇಳಿದೆ.
ಇದು ಇರಾನ್ ಮತ್ತು ಅಮೆರಿಕದ ನೂತನ ಆಡಳಿತದ ವಿರುದ್ಧ ಬೆಳೆಯುತ್ತಿರುವ ಉದ್ವಿಗ್ನತೆಗೆ ತುಪ್ಪ ಸುರಿಯುವ ಎಲ್ಲ ಸಾಧ್ಯತೆಗಳಿವೆ.
‘‘ಡೊನಾಲ್ಡ್ ಟ್ರಂಪ್‌ರ ರಾಷ್ಟ್ರೀಯ ಭದ್ರತೆ ಸಲಹಾಕಾರರು ಆಡಿರುವ ಮಾತುಗಳು ಆಧಾರರಹಿತ, ಪುನರಾವರ್ತಿತ ಹಾಗೂ ಪ್ರಚೋದನಾತ್ಮಕ’’ ಎಂದು ಇರಾನ್ ವಿದೇಶ ಸಚಿವಾಲಯದ ವಕ್ತಾರ ಬಹ್ರಮ್ ಘಸೇಮಿ ಹೇಳಿರುವುದಾಗಿ ಇರಾನ್‌ನ ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ವರದಿ ಮಾಡಿದೆ.
ರವಿವಾರ ಕ್ಷಿಪಣಿ ಪರೀಕ್ಷೆ ನಡೆಸಿದ ಬಳಿಕ, ಇರಾನ್ ಈಗ ಅಧಿಕೃತವಾಗಿ ‘ನಿಗಾ’ದಲ್ಲಿದೆ ಎಂಬುದಾಗಿ ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದರೆ.
‘‘ಪಕ್ಷೇಪಕ ಕ್ಷಿಪಣಿ ಹಾರಾಟ ನಡೆಸಿರುವುದಕ್ಕಾಗಿ ಇರಾನನ್ನು ಅಧಿಕೃತವಾಗಿ ನಿಗಾದಲ್ಲಿರಿಸಲಾಗಿದೆ. ಅದರೊಂದಿಗೆ ಅಮೆರಿಕ ಮಾಡಿರುವ ಭಯಾನಕ ಒಪ್ಪಂದಕ್ಕಾಗಿ ಅದು ಕೃತಜ್ಞವಾಗಿರಬೇಕಾಗಿತ್ತು’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಇದೇ ರೀತಿಯ ಹೇಳಿಕೆಯನ್ನು ರಾಷ್ಟ್ರೀಯ ಭದ್ರತಾ ಸಲಹಾಕಾರ ಮೈಕಲ್ ಫ್ಲಿನ್ ಬುಧವಾರ ನೀಡಿದ್ದರು.