ಅಮೆರಿಕದ ಕುಸ್ತಿ ಪಟುಗಳಿಗೆ ಇರಾನ್ ಪ್ರವೇಶ ನಿಷೇಧ
ಇರಾನ್ ಪ್ರಜೆಗಳು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶಕ್ಕೆ ಪ್ರತಿಯಾಗಿ, ಈ ತಿಂಗಳು ಇರಾನ್‌ನಲ್ಲಿ ನಡೆಯಲಿರುವ ಫ್ರೀಸ್ಟೈಲ್ ಕುಸ್ತಿ ವಿಶ್ವಕಪ್ ಸ್ಪರ್ಧೆಯಲ್ಲಿ ಅಮೆರಿಕದ ಕುಸ್ತುಪಟುಗಳು ಭಾಗವಹಿಸುವುದನ್ನು ಇರಾನ್ ನಿಷೇಧಿಸಿದೆ.
ಅಮೆರಿಕದ ಕುಸ್ತಿ ತಂಡಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಶೇಷ ಸಮಿತಿಯೊಂದು ಪರಿಶೀಲಿಸಿತು ಹಾಗೂ ತಂಡವು ಇರಾನ್‌ಗೆ ಭೇಟಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿತು ಎಂದು ಇರಾನ್ ವಿದೇಶ ಸಚಿವಾಲಯದ ವಕ್ತಾರ ಬಹ್ರಮ್ ಘಸೇಮಿ ಅವರನ್ನು ಉಲ್ಲೇಖಿಸಿ ‘ಇರ್ನ’ ವರದಿ ಮಾಡಿದೆ.
ಕುಸ್ತಿ ಸ್ಪರ್ಧೆಯು ಇರಾನ್‌ನ ಕರ್ಮನ್‌ಶಾಹ್ ನಗರದಲ್ಲಿ ಫೆಬ್ರವರಿ 16 ಮತ್ತು 17ರಂದು ನಡೆಯಲಿದೆ.
ಇರಾನ್ ಬೆಂಕಿಯೊಂದಿಗೆ ಆಟ: ಟ್ರಂಪ್
ಇರಾನ್ ಬೆಂಕಿಯೊಂದಿಗೆ ಆಟವಾಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಇರಾನ್ ನಡೆಸಿದ ಕ್ಷಿಪಣಿ ಪರೀಕ್ಷೆಯ ಹಿನ್ನೆಲೆಯಲ್ಲಿ ಅಮೆರಿಕ ನೀಡಿರುವ ಎಚ್ಚರಿಕೆಯನ್ನು ಇರಾನ್ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಟ್ರಂಪ್ ಹೊಸ ಎಚ್ಚರಿಕೆ ನೀಡಿದ್ದಾರೆ.
‘‘ಇರಾನ್ ಬೆಂಕಿಯೊಂದಿಗೆ ಆಡವಾಡುತ್ತಿದೆ. ಅಧ್ಯಕ್ಷ ಒಬಾಮ ಅವರಿಗೆ ಎಷ್ಟು ದಯಾಳುವಾಗಿದ್ದರು ಎಂಬುದನ್ನೂ ಅವರು ನೆನಪಿನಲ್ಲಿಡುತ್ತಿಲ್ಲ. ನಾನು ಹಾಗಲ್ಲ!’’ ಎಂದು ಶುಕ್ರವಾರ ಬೆಳಗ್ಗೆ ಬರೆದ ಸರಣಿ ಟ್ವೀಟ್‌ಗಳಲ್ಲಿ ಅವರು ಹೇಳಿದ್ದಾರೆ.