×
Ad

ಆಪ್‌ನಿಂದ ತಪ್ಪು ಮಾಹಿತಿ: ಐಟಿ

Update: 2017-02-03 23:52 IST

ಹೊಸದಿಲ್ಲಿ, ಫೆ.3: ಪಕ್ಷಕ್ಕೆ ದೇಣಿಗೆ ಸಂಗ್ರಹಿಸಿದ ಬಗ್ಗೆ ಆಮ್ ಆದ್ಮಿ ಪಕ್ಷ(ಆಪ್) ನೀಡಿರುವ ಲೆಕ್ಕ ಪರಿಶೋಧನಾ ವರದಿ ದೋಷಯುಕ್ತವಾಗಿದ್ದು ಸುಮಾರು 27 ಕೋಟಿ ರೂ.ಯಷ್ಟು ವ್ಯತ್ಯಾಸವನ್ನು ಗಮನಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.


ಆಪ್ ಪಕ್ಷಕ್ಕೆ 2013-14 ಮತ್ತು 2014-15ರಲ್ಲಿ ನೀಡಲಾದ ದೇಣಿಗೆಯ ಪಟ್ಟಿಯಲ್ಲಿ ವಾಸ್ತವಿಕ ವ್ಯತ್ಯಾಸವಿದ್ದು ಈ ಪಕ್ಷವು ವಿವಿಧ ದೇಣಿಗೆದಾರರಿಂದ ಸಂಗ್ರಹಿಸಿದ ದೇಣಿಗೆ ಮೊತ್ತಕ್ಕೆ ತಾಳೆಯಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ. ಸುಮಾರು 27 ಕೋಟಿ ರೂ.ಯಷ್ಟು ವ್ಯತ್ಯಾಸವಿದೆ. ವರದಿಯಲ್ಲಿ ಕೆಲವು ದೋಷ ಗಳಿರುವುದನ್ನು ಪಕ್ಷದ ಕೋಶಾಧಿಕಾರಿ ಗಮನಿಸಿದ್ದರು ಎಂದೂ ವರದಿ ತಿಳಿಸಿದೆ. 1961ರ ಆದಾಯ ತೆರಿಗೆ ಕಾಯ್ದೆಯಡಿ ತಿಳಿಸಲಾಗಿರುವ ರಾಜಕೀಯ ಪಕ್ಷಗಳ ದೇಣಿಗೆಯ ನಿಯಮದ ಉಲ್ಲಂಘನೆಯಾಗಿದ್ದು , ಆಪ್ ಪಕ್ಷಕ್ಕೆ ನೀಡಲಾಗಿರುವ ತೆರಿಗೆ ವಿನಾಯಿತಿ ಸೌಲಭ್ಯವನ್ನು ರದ್ದುಗೊಳಿಸಲು ಅವಕಾಶವಿದೆ. ಅಲ್ಲದೆ ಪಕ್ಷದ ನೋಂದಣಿಯನ್ನು ರದ್ದುಗೊಳಿಸುವ ಕಠಿಣ ಕ್ರಮವನ್ನೂ ಕೈಗೊಳ್ಳಬಹುದು. ಆದರೆ ಈ ಉಪಕ್ರಮಗಳು ಚುನಾವಣಾ ಆಯೋಗದ ವಿವೇಚನೆಗೆ ಒಳಪಟ್ಟಿರುತ್ತವೆ. ಈ ಕುರಿತು ಪ್ರತಿಕ್ರಿಯಿಸಿರುವ ಆಪ್‌ನ ರಾಷ್ಟ್ರೀಯ ಸಂಯೋಜಕ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇದು ಪ್ರಧಾನಿ ನರೇಂದ್ರ ಮೋದಿಯವರ ಕೊಳಕು ರಾಜಕಾರಣಕ್ಕೆ ಮತ್ತೊಂದು ದೃಷ್ಟಾಂತವಾಗಿದೆ. ಪಂಜಾಬ್ ಮತ್ತು ಗೋವಾ ಚುನಾವಣೆಯಲ್ಲಿ ಆಪ್ ಪಕ್ಷದಿಂದ ಮುಖಭಂಗಕ್ಕೆ ಒಳಗಾಗುವ ಭೀತಿಯಲ್ಲಿರುವ ಮೋದಿ, ಆಪ್ ಪಕ್ಷದ ನೋಂದಣಿ ರದ್ದುಗೊಳಿಸುವ ಸಂಚು ನಡೆಸಿದ್ದಾರೆ ಎಂದು ಟೀಕಿಸಿದರು. ಕಾನೂನಿನ ಪ್ರಕಾರ ರಾಜಕೀಯ ಪಕ್ಷಗಳು ಲೆಕ್ಕ ಪರಿಶೋಧಕರಿಂದ ವರದಿ ತಯಾರಿಸಿ ಇದರ ಒಂದು ಪ್ರತಿಯನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News