ಅಧ್ಯಕ್ಷರೂ ಕಾನೂನಿಗಿಂತ ದೊಡ್ಡವರಲ್ಲ: ವಾಷಿಂಗ್ಟನ್ ಅಟಾರ್ನಿ ಜನರಲ್
ಸಿಯಾಟಲ್/ಬಾಸ್ಟನ್, ಫೆ. 4: ಮುಸ್ಲಿಮ್ ಬಾಹುಳ್ಯದ ಏಳು ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶಕ್ಕೆ ಸಿಯಾಟಲ್‌ನ ಫೆಡರಲ್ ನ್ಯಾಯಾಲಯವೊಂದು ಶುಕ್ರವಾರ ರಾಷ್ಟ್ರವ್ಯಾಪಿ ತಡೆಯಾಜ್ಞೆ ವಿಧಿಸಿದೆ.
ಸಿಯಾಟಲ್ ನ್ಯಾಯಾಧೀಶ ಜೇಮ್ಸ್ ರೋಬರ್ಟ್ ನೀಡಿರುವ ತಡೆಯಾಜ್ಞೆ ಟ್ರಂಪ್ ಆದೇಶಕ್ಕೆ ಎದುರಾಗಿರುವ ಪ್ರಮುಖ ಸವಾಲಾಗಿದೆ. ಆದಾಗ್ಯೂ, ಟ್ರಂಪ್ ಆಡಳಿತ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ.
ಅದೇ ವೇಳೆ, ತನ್ನ ಆದೇಶ ಶುಕ್ರವಾರ ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂಬುದಾಗಿ ನ್ಯಾಯಾಧೀಶರು ಹೇಳಿದ್ದಾರೆ. ಹಾಗಾಗಿ ಇರಾನ್, ಇರಾಕ್, ಯಮನ್, ಸುಡಾನ್, ಲಿಬಿಯ, ಸಿರಿಯ ಮತ್ತು ಸೊಮಾಲಿಯಗಳ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ವಿಧಿಸಲಾಗಿರುವ ನಿರ್ಬಂಧ ತಕ್ಷಣ ತೆರವುಗೊಳ್ಳಲಿದೆ.
‘‘ದೇಶದ ಕಾನೂನು ಆಡಳಿತದ ಪಾಲಿಗೆ ಇದು ಸಂಭ್ರಮದ ದಿನ’’ ಎಂಬುದಾಗಿ ವಾಶಿಂಗ್ಟನ್ ರಾಜ್ಯದ ಸಾಲಿಸಿಟರ್ ಜನರಲ್ ನೋ ಪರ್ಸೆಲ್ ಹೇಳಿದರು.
‘‘ಈ ತೀರ್ಪು ಟ್ರಂಪ್‌ರ ಆದೇಶವನ್ನು ತಕ್ಷಣದಿಂದ ರದ್ದುಪಡಿಸುತ್ತದೆ’’ ಎಂದು ವಾಶಿಂಗ್ಟನ್ ರಾಜ್ಯದ ಅಟಾರ್ನಿ ಜನರಲ್ ಬಾಬ್ ಫರ್ಗ್ಯೂಸನ್ ತಿಳಿಸಿದರು.
ಈ ತೀರ್ಪನ್ನು ಫೆಡರಲ್ ಸರಕಾರ (ಕೇಂದ್ರ ಸರಕಾರ) ಗೌರವಿಸುತ್ತದೆ ಎಂದು ತಾನು ಭಾವಿಸುವುದಾಗಿ ಅವರು ಹೇಳಿದರು.
ಜನವರಿ 27ರಂದು ಟ್ರಂಪ್ ಸಹಿ ಹಾಕಿರುವ ವಲಸೆ ನಿಷೇಧ ಆದೇಶ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ವಿದೇಶಗಳಿಗೆ ಹೋಗಿದ್ದ ವಲಸಿಗರು ಅಮೆರಿಕಕ್ಕೆ ವಾಪಸ್ ಹೋಗುವ ವಿಮಾನಗಳನ್ನು ಏರುವುದನ್ನು ನಿಷೇಧಿಸಲಾಗಿತ್ತು. ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಬಂದು ಸೇರಿದ್ದ ನೂರಾರು ವಲಸಿಗರು ಪ್ರತಿಭಟನೆ ನಡೆಸಿದ್ದರು.
ಟ್ರಂಪ್ ಆದೇಶವನ್ನು ಪ್ರಶ್ನಿಸಿ ನಾಲ್ಕು ರಾಜ್ಯಗಳ ಅಟಾರ್ನಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಸಲ್ಲಿಸಿದ್ದರು.
ಟ್ರಂಪ್ ಆಡಳಿತವು ವಲಸೆ ನಿಷೇಧ ಆದೇಶವನ್ನು ಸಮರ್ಥಿಸಿದ್ದು, ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಆದರೆ, ಇದು ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಜನರನ್ನು ತಾರತಮ್ಯಕ್ಕೆ ಗುರಿಪಡಿಸುವ ಕ್ರಮವಾಗಿದೆ ಎಂಬುದಾಗಿ ವಲಸೆ ನಿಷೇಧದ ವಿರೋಧಿಗಳು ಹೇಳುತ್ತಾರೆ.
ಇದಕ್ಕೂ ಮೊದಲು, ಬಾಸ್ಟನ್‌ನ ಫೆಡರಲ್ ನ್ಯಾಯಾಧೀಶರೊಬ್ಬರು, ನಿಷೇಧದ ಪರಿಣಾಮಕ್ಕೆ ಒಳಗಾಗಿರುವ ದೇಶಗಳಿಂದ ಬರುವವರಿಗೆ ಅಮೆರಿಕ ಪ್ರವೇಶಿಸಲು ಸಾಧ್ಯವಾಗುವಂತೆ ವಿಧಿಸಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ವಿಸ್ತರಿಸಲು ನಿರಾಕರಿಸಿದ್ದರು.
ತೀರ್ಪು ಹಾಸ್ಯಾಸ್ಪದ: ಟ್ರಂಪ್
ತನ್ನ ವಲಸೆ ನಿಷೇಧ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಫೆಡರಲ್ ನ್ಯಾಯಾಲಯವೊಂದರ ತೀರ್ಪಿನ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಂಡ ಕಾರಿದ್ದಾರೆ.
ತೀರ್ಪನ್ನು ‘ಹಾಸ್ಯಾಸ್ಪದ’ ಎಂಬುದಾಗಿ ಬಣ್ಣಿಸಿರುವ ಅವರು, ಅದನ್ನು ತೆರವುಗೊಳಿಸುವುದಾಗಿ ಪ್ರತಿಜ್ಞೆಗೈದರು.