ಟ್ರಂಪ್ ಆದೇಶದಿಂದ ಕರಾಚಿ ಸಂಜಾತ ಅಮೆರಿಕನ್ ಕ್ರಿಕೆಟಿಗ ಬಬ್ಬರ್ ಸ್ಟಂಪ್ಡ್
ವಾಷಿಂಗ್ಟನ್,ಫೆ.4: ವಲಸಿಗರ ಅಮೆರಿಕಾ ಪ್ರವೇಶವನ್ನು ನಿಷೇಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ ಹೊರಡಿಸಿರುವ ಆದೇಶವು ಕರಾಚಿ ಸಂಜಾತ ಅಮೆರಿಕನ್ ಬ್ಯಾಟ್ಸ್‌ಮನ್ ಫಹಾದ್ ಬಬ್ಬರ್(24) ಅವರಿಗೆ ಚೆನ್ನಾಗಿಯೇ ಬಿಸಿ ಮುಟ್ಟಿಸಿದೆ. ಬಾರ್ಬಡೋಸ್‌ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ರೀಜನಲ್ ಸೂಪರ್ 50 ಕ್ರಿಕೆಟ್ ಪಂದ್ಯಾವಳಿಯಲ್ಲಿ ಐಸಿಸಿ ಅಮೆರಿಕಾ ತಂಡದ ಪರವಾಗಿ ಆಡುತ್ತಿದ್ದ ಬಬ್ಬರ್ ಟ್ರಂಪ್ ಆದೇಶ ಕಿವಿಗೆ ಬಿದ್ದ ತಕ್ಷಣ ತನ್ನ ಪ್ರವೇಶವನ್ನೂ ನಿಷೇಧಿಸಬಹುದು ಎಂಬ ಭೀತಿಯಲ್ಲಿ ಪಂದ್ಯಾವಳಿಯನ್ನು ತೊರೆದು ತರಾತುರಿಯಲ್ಲಿ ಅಮೆರಿಕಾಕ್ಕೆ ವಾಪಸಾಗಿದ್ದಾರೆ.
ಅಮೆರಿಕಾಕ್ಕೆ ಮರಳುವ ಮುನ್ನ ಬಬ್ಬರ್ ಜ.30ರಂದು ಗಯಾನಾ ಮತ್ತು ಫೆ.1ರಂದು ಜಮೈಕಾ ವಿರುದ್ಧ ಪಂದ್ಯಗಳಲ್ಲಿ ಆಡಿದ್ದು, ಇನ್ನೂ ನಾಲ್ಕು ಗುಂಪು ಹಂತದ ಪಂದ್ಯಗಳನ್ನು ಆಡಬೇಕಾಗಿತ್ತು.
ತಕ್ಷಣವೇ ಅಮೆರಿಕಾಕ್ಕೆ ವಾಪಸಾಗಿ, ಇಲ್ಲದಿದ್ದರೆ ನಿಷೇಧ ಎದುರಿಸಬೇಕಾದೀತು ಎಂದು ಬಬ್ಬರ್‌ರ ವಲಸೆ ವಕೀಲರಾದ ವಿಲಿಯಂ ಮೆಕ್ಲೀನ್ ಎಚ್ಚರಿಕೆ ನೀಡಿದ್ದರೆನ್ನಲಾಗಿದೆ.
ತನ್ನ 14ನೇ ವಯಸ್ಸಿನಿಂದ ಅಮೆರಿಕದಲ್ಲಿ ವಾಸವಾಗಿರುವ ಬಬ್ಬರ್ ಐಸಿಸಿಯ ಏಳು ವರ್ಷಗಳ ರೆಸಿಡೆನ್ಸಿ ನಿಯಮದಡಿ ಅಮೆರಿಕವನ್ನು ಪ್ರತಿನಿಧಿಸುತ್ತಿದ್ದಾರೆ.
ಟ್ರಂಪ್ ಹೇರಿರುವ ನಿಷೇಧ ಜ.27ರಿಂದ ಜಾರಿಗೆ ಬಂದಿದೆ. ನಿರಾಶ್ರಿತರು 120 ದಿನಗಳವರೆಗೆ ಮತ್ತು ಮುಸ್ಲಿಮ್ ಬಾಹುಳ್ಯದ ರಾಷ್ಟ್ರಗಳಾದ ಇರಾನ್, ಇರಾಕ್, ಲಿಬಿಯಾ, ಸೋಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ಪ್ರಜೆಗಳು 90 ದಿನಗಳವರೆಗೆ ಅಮೆರಿಕಾವನ್ನು ಪ್ರವೇಶಿಸುವಂತಿಲ್ಲ.
ಬಬ್ಬರ್ ನಿರಾಶ್ರಿತರೂ ಅಲ್ಲ, ಈ ಏಳು ದೇಶಗಳ ಪೈಕಿ ಯಾವುದೇ ದೇಶದ ಪ್ರಜೆಯೂ ಅಲ್ಲ. ಆದರೆ ಈ ಪಟ್ಟಿ ಯಾವಾಗ ಬೇಕಾದರೂ ವಿಸ್ತರಣೆಯಾಗಬಹುದು ಮತ್ತು ಬಬ್ಬರ್ ತಾಯ್ನಿಡು ಪಾಕಿಸ್ತಾನವೂ ಸೇರ್ಪಡೆಗೊಳ್ಳಬಹುದು. ಹಾಗೇನಾದರೂ ಆದರೆ ಬಬ್ಬರ್ ಅಮೆರಿಕನ್ ಪ್ರಜೆಯಲ್ಲ ಎಂಬ ಕಾರಣದಿಂದ ಅವರಿಗೆ ಪ್ರವೇಶವನ್ನು ನಿರಾಕರಿಸಬಹುದು ಎಂದು ಮೆಕ್ಲೀನ್ ಆತಂಕವನ್ನು ವ್ಯಕ್ತಪಡಿಸಿದ್ದರು.
ಬಾರ್ಬಡೋಸ್‌ನಲ್ಲಿ ಆಡುತ್ತಿರುವ ಐಸಿಸಿ ಅಮೆರಿಕಾ ತಂಡದ ಆರು ಮುಸ್ಲಿಮ್ ಸದಸ್ಯರ ಪೈಕಿ ಬಬ್ಬರ್ ಓರ್ವರು. ಆದರೆ ದೇಶಕ್ಕೆ ಮರಳುವಲ್ಲಿ ತೊಂದರೆ ಎದುರಾಗ ಲಿದ್ದುದು ಅವರಿಗೆ ಮಾತ್ರ. ಅವರ ಮುಸ್ಲಿಮ್ ಸಹ ಆಟಗಾರರ ಪೈಕಿ ಅಲಿ ಖಾನ್ ಮತ್ತು ಅಕೀಂ ಡಾಡ್ಸನ್ ಅವರು ಅಮೆರಿಕಾದ ಪ್ರಜೆಗಳಾಗಿದ್ದರೆ, ಇತರ ಮೂವರು ಕೆನಡಾ ನಿವಾಸಿಗಳಾಗಿದ್ದಾರೆ.