×
Ad

ಎಟಿಎಂನಲ್ಲಿ ಮಹಿಳೆಗೆ ಗಂಭೀರ ಹಲ್ಲೆ ಪ್ರಕರಣ:ಕೊನೆಗೂ ಆಂಧ್ರದಲ್ಲಿ ಸೆರೆ ಸಿಕ್ಕ ಆರೋಪಿ

Update: 2017-02-04 15:35 IST

 ಬೆಂಗಳೂರು, ಫೆ.4: ಕಾರ್ಪೋರೇಶನ್ ಬ್ಯಾಂಕ್ ಎಟಿಎಂನಲ್ಲಿ ಹಣ ಹಿಂಪಡೆಯುತ್ತಿದ್ದಾಗ ಅಕ್ರಮವಾಗಿ ಎಟಿಎಂನೊಳಗೆ ನುಗ್ಗಿ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್‌ರಿಗೆ ಮಚ್ಚಿನಿಂದ ಮಾರಾಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯನ್ನು ಕರ್ನಾಟಕ-ಆಂಧ್ರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಆಂಧ್ರಪ್ರದೇಶದಲ್ಲಿ ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ.

ಆರೋಪಿ ಮಧುಕರ ರೆಡ್ಡಿ ಎಂಬಾತನನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಎಂಬಲ್ಲಿ ಬಂಧಿಸಲಾಗಿದೆ. ಮದನಪಲ್ಲಿಯ ನಲ್ಲಪಲ್ಲಿಯಲ್ಲಿ ಟ್ರಾಫಿಕ್ ಪೊಲೀಸರು ರಸ್ತೆ ಬದಿ ನಿಂತಿದ್ದ ರೆಡ್ಡಿಯ ಗುರುತು ಪತ್ತೆ ಹಚ್ಚಿದ್ದರು. ಪೊಲೀಸರ ಬಳಿ ತಪ್ಪೊಪ್ಪಿಕೊಂಡಿರುವ ಆರೋಪಿ ರೆಡ್ಡಿಯನ್ನು ರಾಜ್ಯಕ್ಕೆ ಕರೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ.

 ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಈ ಘಟನೆ 2013ರ ನವೆಂಬರ್ 19 ರಂದು ಬೆಳಗ್ಗೆ 7:30ಕ್ಕೆ ನಡೆದಿತ್ತು. ಜ್ಯೋತಿ ಅವರ ಮೇಲೆ ಎಟಿಎಂನೊಳಗೆ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿ ಪರಾಗಿಯಾಗಿದ್ದ. ಹಲ್ಲೆ ನಡೆಸುವಂತಹ ಭೀಭತ್ಸ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

ಆರೋಪಿಯನ್ನು 3 ವರ್ಷಗಳ ಬಳಿಕ ಆಂಧ್ರಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಗೃಹ ಸಚಿವರ ಶ್ಲಾಘನೆ: ಮೂರು ವರ್ಷಗಳ ನಂತರ ಎಟಿಎಂನಲ್ಲಿ ಮಹಿಳೆಯೊಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿದ್ದ ಆರೋಪಿಯನ್ನು ಬಂಧಿಸಿರುವ ಕರ್ನಾಟಕ-ಆಂಧ್ರ ಪೊಲೀಸರ ಕಾರ್ಯಾಚರಣೆಗೆ ಗೃಹ ಸಚಿವರಾದ ಪರಮೇಶ್ವರ್ ಶ್ಲಾಘನೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News