ಈ ದೇಶದಲ್ಲಿ ಸೊಳ್ಳೆಗಳೇ ಇಲ್ಲ !

Update: 2017-02-04 11:00 GMT

ಭಾರತೀಯರಾದ ನಮ್ಮ ಜೀವನದಲ್ಲಿ ಸೊಳ್ಳೆಗಳ ಕಾಟ ಅವಿಭಾಜ್ಯ ಅಂಗವಾಗಿದೆ. ಸೊಳ್ಳೆಗಳು ಈ ದೇಶದಲ್ಲಿ ಸರ್ವಾಂತರ್ಯಾಮಿಗಳಾಗಿವೆ. ಅದು ನಮ್ಮ ಹಣೆಬರಹ! ಆದರೆ ಐಸ್‌ಲ್ಯಾಂಡ್ ದೇಶದ ಜನರ ಅದೃಷ್ಟವನ್ನು ಕಂಡರೆ ನಿಜಕ್ಕೂ ಹೊಟ್ಟೆಕಿಚ್ಚಾ ಗುತ್ತದೆ...ಆ ರಾಷ್ಟ್ರದಲ್ಲಿ ಸೊಳ್ಳೆಗಳೇ ಇಲ್ಲ!

ವಿಶ್ವಾದ್ಯಂತ 2,500ಕ್ಕೂ ಅಧಿಕ ಜಾತಿಗಳ ಸೊಳ್ಳೆಗಳು ಮನುಷ್ಯರ ರಕ್ತ ಹೀರುತ್ತಿವೆ. ಮಲೇರಿಯಾ,ಡೆಂಗ್‌ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿವೆ. ಆರ್ದ್ರ,ತೇವಭರಿತ ವಾತಾವರಣ ಸೊಳ್ಳೆಗಳಿಗೆ ಹೇಳಿ ಮಾಡಿಸಿದಂತಿದ್ದರೆ, ಆರ್ಕ್ಟಿಕ್ ಅಥವಾ ಅಂಟಾರ್ಕ್ಟಿಕ್ ಪ್ರದೇಶಗಳಲ್ಲಿ ಇವುಗಳ ಸಂಖ್ಯೆ ಕಡಿಮೆಯಿದೆ.

 ಐಸ್‌ಲ್ಯಾಂಡ್ ಈ ಸೊಳ್ಳೆಗಳಿಂದ ಸಂಪೂರ್ಣ ಮುಕ್ತ ದೇಶವಾಗಿದೆ. ಐಸಲ್ಯಾಂಡ್‌ನ ತಾಪಮಾನ ಮತ್ತು ಸೊಳ್ಳೆಗಳನ್ನು ದೂರವಿರಿಸುವಲ್ಲಿ ಅದರ ಪರಿಣಾಮಗಳ ಬಗ್ಗೆ ಹಲವಾರು ವಿಜ್ಞಾನಿಗಳು ಮತ್ತು ಸಂಶೋಧಕರು ಸಾಕಷ್ಟು ಅಧ್ಯಯನಗಳನ್ನು ಮಾಡಿದ್ದಾರೆ. ಅಂಟಾರ್ಕ್ಟಿಕಾದಂತಹ ಶೀತಲ ವಾತಾವರಣ ಸೇರಿದಂತೆ ವಿವಿಧ ಪರಿಸರಗಳಲ್ಲಿ ಸೊಳ್ಳೆಗಳು ತಮ್ಮ ಸಂತತಿಯನ್ನು ವೃದ್ಧಿಸುತ್ತವೆ, ಆದರೆ ಐಸ್‌ಲ್ಯಾಂಡ್‌ನಲ್ಲಿ ಮಾತ್ರ ಸಾಧ್ಯವಿಲ್ಲ.

ವಿಶ್ವದ ಅತ್ಯಂತ ತಂಪು ಪ್ರದೇಶಗಳಲ್ಲಿಯೂ ಸೊಳ್ಳೆ ಸಂತಾನ ಬೆಳೆಯುತ್ತದೆ, ಆದರೆ ಐಸ್‌ಲ್ಯಾಂಡಿನಲ್ಲಲ್ಲ. ಐಸ್‌ಲ್ಯಾಂಡಿನಲ್ಲಿ ವರ್ಷದಲ್ಲಿ ಮೂರು ಬಾರಿ ಮಂಜುಗಟ್ಟಿದ ವಾತಾವರಣವಿರುತ್ತದೆ ಮತ್ತು ಒಂದು ಬಾರಿ ಕರಗುತ್ತದೆ. ಹೀಗಾಗಿ ಸೊಳ್ಳೆಗಳಿಗೆ ಇಲ್ಲಿ ಉಳಿಗಾಲವಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಈ ದೇಶದ ಮಣ್ಣು ಮತ್ತು ನೀರಿನ ರಾಸಾಯನಿಕ ಸಂಯೋಜನೆಯು ಸೊಳ್ಳೆಗಳು ಇಲ್ಲದಿರುವುದ್ಕಕೆ ಕಾರಣ ಎಂಬ ವೈಜ್ಞಾನಿಕ ವಾದವೂ ಇದೆ. ಅದೇಕೋ ಸೊಳ್ಳೆಗಳಿಗೆ ಮಾತ್ರ ಐಸ್‌ಲ್ಯಾಂಡ್‌ನಲ್ಲಿ ಬದುಕುವ ಅದೃಷ್ಟವಿಲ್ಲ !

ಸೊಳ್ಳೆಗಳ ವಿಷಯದಲ್ಲಿ ಐಃಸ್‌ಲ್ಯಾಂಡಿಗರು ಅದೃಷ್ಟಶಾಲಿಗಳಾಗಿದ್ದರೂ, ಆ ದೇಶವು ನೀರ್ಗಲ್ಲುಗಳ ಕರಗುವಿಕೆಯೊಂದಿಗೆ ಜಾಗತಿಕ ತಾಪಮಾನ ಏರಿಕೆಯ ಪರಿಣಾಮವನ್ನು ಅನುಭವಿಸುತ್ತಿದೆ. ಪರಿಸರ ಮತ್ತು ವಾತಾವರಣದಲ್ಲಿ ಬದಲಾವಣೆ ಈ ದೇಶದ ಚಿತ್ರಣವನ್ನು ಬದಲಿಸಬಹುದು ಮತ್ತು ಸೊಳ್ಳೆಗಳು ಈ ದೇಶದಲ್ಲಿ ಗುಂಯಗುಡು ತ್ತಿರುವುದು ಕಂಡು ಬಂದರೆ ಅಚ್ಚರಿ ಪಡಬೇಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News