ಇರಾನ್ ವಿರುದ್ಧ ಅಮೆರಿಕದಿಂದ ಹೊಸ ದಿಗ್ಬಂಧನೆ
ವಾಶಿಂಗ್ಟನ್, ಫೆ. 4: ಇರಾನ್ ಇತ್ತೀಚೆಗೆ ನಡೆಸಿದ ಕ್ಷಿಪಣಿ ಪರೀಕ್ಷೆ ಹಾಗೂ ಯಮನ್‌ನ ಹೌದಿ ಬಂಡುಕೋರರಿಗೆ ಅದು ನೀಡುತ್ತಿರುವ ಬೆಂಬಲಕ್ಕಾಗಿ ಅದರ ವಿರುದ್ಧ ಅಮೆರಿಕ ಶುಕ್ರವಾರ ಹೊಸದಾಗಿ ದಿಗ್ಬಂಧನೆಗಳನ್ನು ವಿಧಿಸಿದೆ.
ಇದು ಟ್ರಂಪ್ ಆಡಳಿತ ಇರಾನ್ ವಿರುದ್ಧ ವಿಧಿಸುತ್ತಿರುವ ಮೊದಲ ದಿಗ್ಬಂಧನೆಯಾಗಿದೆ. ಇರಾನ್‌ನ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮ ಮತ್ತು ಆ ದೇಶದ ಸೇನಾ ಪಡೆ ‘ರೆವಲೂಶನರಿ ಗಾರ್ಡ್ಸ್’ಗೆ ನೆರವು ನೀಡುತ್ತಿರುವ, ಇರಾನ್ ಮತ್ತು ಚೀನಾಗಳಲ್ಲಿರುವ ಕಂಪೆನಿಗಳು ಮತ್ತು ವ್ಯಕ್ತಿಗಳನ್ನು ದಿಗ್ಬಂಧನೆಯು ಗುರಿ ಮಾಡಿದೆ.
‘‘ಇರಾನ್ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವುದು ಹಾಗೂ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿರುವುದು ವಲಯಕ್ಕೆ, ಜಗತ್ತಿನಾದ್ಯಂತ ಇರುವ ನಮ್ಮ ಭಾಗೀದಾರರಿಗೆ ಮತ್ತು ಅಮೆರಿಕಕ್ಕೆ ಬೆದರಿಕೆಯೊಡ್ಡಿದೆ’’ ಎಂದು ವಿದೇಶಿ ಸೊತ್ತುಗಳ ನಿಯಂತ್ರಣದ ಖಜಾನೆ ಕಚೇರಿಯ ಉಸ್ತುವಾರಿ ನಿರ್ದೇಶಕ ಜಾನ್ ಸ್ಮಿತ್ ಹೇಳಿದ್ದಾರೆ.
ಇರಾನ್ ರವಿವಾರ ಮಧ್ಯಮ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಇದು ಪರಮಾಣು ಸಾಧನವೊಂದನ್ನು ಒಯ್ಯುವ ಕ್ಷಿಪಣಿಯನ್ನು ನಿಷೇಧಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸುತ್ತದೆ ಎಂದು ಶ್ವೇತಭವನ ಹೇಳಿದೆ.
ವೈರಿಗಳು ತಪ್ಪು ಮಾಡಿದರೆ ನಾವು ಕ್ಷಿಪಣಿ ಹಾರಿಸುತ್ತೇವೆ :ಇರಾನ್ ಎಚ್ಚರಿಕೆಟೆಹರಾನ್ (ಇರಾನ್), ಫೆ. 4: ಇರಾನ್‌ನ ವೈರಿಗಳು ತಪ್ಪು ಮಾಡಿದರೆ ಅದರ ಕ್ಷಿಪಣಿಗಳು ಆ ದೇಶಗಳ ಮೇಲೆ ಹಾರುವುದು ಎಂದು ಇರಾನ್‌ನ ಸೇನೆ ರೆವಲೂಶನರಿ ಗಾರ್ಡ್ಸ್‌ನ ಹಿರಿಯ ಕಮಾಂಡರ್ ಓರ್ವರನ್ನು ಉಲ್ಲೇಖಿಸಿ ‘ತಸ್ನಿಮ್’ ವಾರ್ತಾ ಸಂಸ್ಥೆ ವರದಿ ಮಾಡಿದೆ.
‘‘ನಮ್ಮ ಶತ್ರುಗಳು ನಿಯಂತ್ರಣ ಮೀರಿದರೆ ನಮ್ಮ ಕ್ಷಿಪಣಿಗಳು ಅವರ ಮೇಲೆ ಎರಗುತ್ತವೆ’’ ಎಂದು ಗಾರ್ಡ್ಸ್‌ನ ವಾಯು ವಿಭಾಗದ ಮುಖ್ಯಸ್ಥ ಜನರಲ್ ಅಮೀರ್ ಅಲಿ ಹಾಜಿಝಾದೇಹ್ ಹೇಳಿದ್ದಾರೆ.