×
Ad

ಕುಸ್ತಿಯಲ್ಲಿ ಭಾಗವಹಿಸಲು ಅಮೆರಿಕನ್ನರಿಗೆ ವೀಸಾ: ಇರಾನ್

Update: 2017-02-05 19:10 IST

ಟೆಹರಾನ್, ಫೆ. 5: ಇರಾನ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯೊಂದರಲ್ಲಿ ಭಾಗವಹಿಸಲು ಅಮೆರಿಕದ ಕುಸ್ತಿಪಟುಗಳಿಗೆ ಅನುಮತಿ ನೀಡುವುದಾಗಿ ಆ ದೇಶ ರವಿವಾರ ಹೇಳಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮುಸ್ಲಿಮ್ ನಿಷೇಧ ಆದೇಶಕ್ಕೆ ಫೆಡರಲ್ ನ್ಯಾಯಾಲಯವೊಂದು ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.

‘‘ಮುಸ್ಲಿಮ್ ನಿಷೇಧ ಆದೇಶವನ್ನು ಅಮೆರಿಕದ ನ್ಯಾಯಾಲಯ ತಡೆಹಿಡಿದಿರುವ ಹಿನ್ನೆಲೆಯಲ್ಲಿ, ಅಮೆರಿಕದ ಕುಸ್ತಿ ಪಟುಗಳಿಗೆ ವೀಸಾ ನೀಡಲಾಗುವುದು’’ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಝರೀಫ್ ತಿಳಿಸಿದರು.

ಟ್ರಂಪ್‌ರ ಮುಸ್ಲಿಮ್ ನಿಷೇಧ ಆದೇಶದ ಬಳಿಕ, ತನ್ನ ದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಅಮೆರಿಕದ ಸ್ಪರ್ಧಿಗಳಿಗೆ ವೀಸಾ ನೀಡಲು ಇರಾನ್ ನಿರಾಕರಿಸಿತ್ತು. ಹಾಗಾಗಿ, ಫೆಬ್ರವರಿ 16 ಮತ್ತು 17ರಂದು ನಡೆಯಲಿರುವ ಪಂದ್ಯಾವಳಿಯಲ್ಲಿ ಅಮೆರಿಕದ ಕ್ರೀಡಾಪಟುಗಳು ಭಾಗವಹಿಸುವುದು ಅಸಾಧ್ಯವಾಗಿತ್ತು.

ಅಮೆರಿಕನ್ನರಿಗೆ ‘ಬಂದ ನಂತರವೇ ವೀಸಾ’ ಕೊಡಿ :ಶೈಕ್ಷಣಿಕ ವಿದ್ವಾಂಸರ ಕರೆ

ಈ ನಡುವೆ, ಅಮೆರಿಕದ ನಾಗರಿಕರಿಗೆ ‘ಬಂದ ನಂತರವೇ ವೀಸಾ’ (ವೀಸಾ ಆನ್ ಅರೈವಲ್) ನೀಡುವ ಮೂಲಕ ಅಮೆರಿಕಕ್ಕಿಂತ ಎತ್ತರದ ಸ್ಥಾನದಲ್ಲಿ ನಿಲ್ಲುವಂತೆ ಇರಾನ್‌ಗೆ ಕರೆ ನೀಡುವ ಪತ್ರವೊಂದಕ್ಕೆ ಟೆಹರಾನ್‌ನ ಪ್ರತಿಷ್ಠಿತ ಶರೀಫ್ ವಿಶ್ವವಿದ್ಯಾನಿಲಯದ 72 ವಿದ್ವಾಂಸರು ಸಹಿ ಹಾಕಿದ್ದಾರೆ.

‘‘ಅಮೆರಿಕದ ಮುಸ್ಲಿಮ್ ನಿಷೇಧ ಆದೇಶಕ್ಕೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ನಾವು ನಮ್ಮ ಸರಕಾರಕ್ಕೆ ಮನವಿ ಮಾಡುತ್ತೇವೆ’’ ಎಂದು ಪತ್ರ ತಿಳಿಸಿದೆ.

‘‘ಶಾಂತಿಯುತ ಇರಾನಿಯನ್ನರು ಮತ್ತು ಮುಸ್ಲಿಮರ ಆತಿಥ್ಯವನ್ನು ಅನುಭವಿಸಲು ಅಮೆರಿಕನ್ನರಿಗೆ ಉತ್ತೇಜನ ನೀಡಬೇಕು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News