×
Ad

‘ಹಣ ಶುದ್ಧೀಕರಣ ಅಭಿಯಾನ’ದಡಿ ಒಂದು ಕೋಟಿ ಖಾತೆಗಳ ಪರಿಶೀಲನೆ

Update: 2017-02-05 23:48 IST

ಹೊಸದಿಲ್ಲಿ,ಫೆ.5: ನೋಟು ಅಮಾನ್ಯ ಕ್ರಮದ ಬಳಿಕ ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿರುವ ಕಪ್ಪುಹಣವನ್ನು ಪತ್ತೆ ಹಚ್ಚುವ ಪ್ರಯತ್ನವಾಗಿ ಆದಾಯ ತೆರಿಗೆ (ಐಟಿ)ಇಲಾಖೆಯು ಒಂದು ಕೋಟಿ ಬ್ಯಾಂಕ್ ಖಾತೆಗಳನ್ನು ತನ್ನ ಬಳಿಯಿರುವ ದತ್ತಾಂಶಗಳೊಂದಿಗೆ ಹೋಲಿಕೆಯ ಬಳಿಕ 2016, ನ.10ರಿಂದ ಡಿ.30ರವರೆಗೆ ಐದು ಲಕ್ಷ ರೂ.ಮತ್ತು ಅಧಿಕ ವೌಲ್ಯದ ಹಳೆಯ ನೋಟುಗಳನ್ನು ಠೇವಣಿ ಮಾಡಿರುವ 18 ಲಕ್ಷ ಜನರಿಗೆ ಆದಾಯ ಮೂಲವನ್ನು ವಿವರಿಸುವಂತೆ ಸೂಚಿಸಿದೆ.

ಐಟಿ ದಾಖಲೆಗಳಂತೆ 2014-15ನೇ ತೆರಿಗೆ ವರ್ಷದಲ್ಲಿ 3.5 ಕೋ.ಜನರು ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ಏಳು ಲಕ್ಷಕ್ಕೂ ಅಧಿಕ ಕಂಪೆನಿಗಳು, 9.40 ಲ.ಹಿಂದೂ ಅವಿಭಕ್ತ ಕುಟುಂಬಗಳು ಮತ್ತು 9.18 ಲ.ಸಂಸ್ಥೆಗಳೂ ರಿಟರ್ನ್‌ಗಳನ್ನು ಸಲ್ಲಿಸಿವೆ. ಆರ್ಥಿಕ ಸೇರ್ಪಡೆ ಅಭಿಯಾನದ ಅಂಗವಾಗಿ 25 ಕೋ.ಗೂ ಅಧಿಕ ಶೂನ್ಯ ಶಿಲ್ಕಿನ ಜನಧನ್ ಖಾತೆಗಳನ್ನೂ ತೆರೆಯಲಾಗಿದೆ.
ಜ.31ರಿಂದ ಆರಂಭಗೊಂಡಿರುವ ‘ಹಣ ಶುದ್ಧೀಕರಣ ಅಭಿಯಾನ’ದಡಿ ಎಲ್ಲ ವರ್ಗಗಳ ಖಾತೆಗಳನ್ನು ಐಟಿ ಇಲಾಖೆಯು ಪರಿಶೀಲಿಸುತ್ತಿದ್ದು, ಶಂಕಾಸ್ಪದ ಠೇವಣಿಗಳಿಗಾಗಿ ಇನ್ನಷ್ಟು ಎಸ್‌ಎಂಎಸ್/ಮೇಲ್‌ಗಳನ್ನು ಕಳುಹಿಸಲಿದೆ.
ತೆರಿಗೆದಾತರಿಗೆ ಕಿರುಕುಳವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನೋಟು ಅಮಾನ್ಯದ ಬಳಿಕ ಬ್ಯಾಂಕ್ ಠೇವಣಿಗಳ ಕುರಿತಂತೆ ಉತ್ತರಗಳು ತೃಪ್ತಿದಾಯಕವಾಗಿಲ್ಲದಿದ್ದರೆ ಸಹಾಯಕ ಆಯುಕ್ತರು ಮತ್ತು ಮೇಲಿನ ದರ್ಜೆಯ ಅಧಿಕಾರಿಗಳು ಮಾತ್ರ ನೋಟಿಸನ್ನು ಹೊರಡಿಸುವುದನ್ನು ಕಂದಾಯ ಇಲಾಖೆಯು ಕಡ್ಡಾಯಗೊಳಿಸಿದೆ.
ನೋಟು ಅಮಾನ್ಯದ ಬಳಿಕ ತಮ್ಮ ಖಾತೆಗಳಲ್ಲಿ ಮಾಡಿರುವ ಠೇವಣಿಗಳನ್ನು ಇ-ದೃಢೀಕರಿಸುವಂತೆ ಮತ್ತು ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಯಾವುದೇ ಅಸಮಂಜಸತೆ ಕುರಿತು ವಿಚಾರಣೆಗೆ ಉತ್ತರಿಸುವಂತೆ ತೆರಿಗೆದಾತರಿಗೂ ಇಲಾಖೆಯು ಸೂಚಿಸಿದೆ. ಇಂತಹ ಠೇವಣಿಯು ಆಯವ್ಯಯ ಪತ್ರದಲ್ಲಿಯ ಕೈಯಲ್ಲಿದ್ದ ಶಿಲ್ಕು ಹಣವಾಗಿದ್ದರೆ ಯಾವುದೇ ಪ್ರಶ್ನೆಯನ್ನು ಕೇಳಲಾಗುವುದಿಲ್ಲ ಮತ್ತು ಪ್ರಕರಣವನ್ನು ಅಲ್ಲಿಗೇ ಮುಕ್ತಾಯಗೊಳಿಸಲಾಗುವುದು. ತೆರಿಗೆದಾತರಿಗೆ ಯಾವುದೇ ಕಿರುಕುಳವಾಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ನಾವು ತೆಗೆದು ಕೊಂಡಿದ್ದೇವೆ ಎಂದು ಇಲಾಖಾ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News