ಕುರ್‌ಆನ್ ಓದಿನಿಂದ ಶಾಂತಿಯ ಅನುಭವ : ಲಿಂಡ್ಸೆ ಲೋಹನ್
ಜಿದ್ದಾ,ಫೆ.6 :ಅರಬಿಕ್ ಟಿವಿ ಶೋ ಸಿವಾರ್ ಶೋಯೆಬ್ ನಲ್ಲಿ ಭಾಗವಹಿಸಿದ ಹಾಲಿವುಡ್ ನಟಿ ಲಿಂಡ್ಸೆ ಲೋಹನ್ ಇಸ್ಲಾಮ್ ಜತೆಗಿನ ತನ್ನ ಸಂಬಂಧವನ್ನು ಬಹಿರಂಗಪಡಿಸಿದ್ದು ಕುರ್ ಆನ್ ಓದಿ ತನಗೆ ಶಾಂತಿಯ ಅನುಭವವಾಗಿದೆ ಎಂದು ಹೇಳಿದ್ದಾರೆ.
ಲಿಂಡ್ಸೆ ಕುರ್ ಆನ್ ಪ್ರತಿಯೊಂದನ್ನು ಕೈಯಲ್ಲಿ ಹಿಡಿದಿರುವ ಖ್ಯಾತ ಫೊಟೋ ಬಗ್ಗೆ ಕಾರ್ಯಕ್ರಮದ ಹೋಸ್ಟ್ ಶೋಯೆಬ್ ರಶೀದ್ ಅವರು ಪ್ರಶ್ನಿಸಿದಾಗ ಯಾವುದೇ ತಡವರಿಕೆಯಿಲ್ಲದೆ ಉತ್ತರಿಸಿದ ನಟಿ ಆ ಫೋಟೋ ತೆಗೆಯುವ ಸಮಯದಲ್ಲಿ ತಾನು ಹಲವಾರು ತಳಮಳಗಳನ್ನು ಹೊಂದಿದ್ದಾಗಿ ಹಾಗೂ ಆ ಸಮಯ ಪವಿತ್ರ ಕುರ್ ಆನ್ ನ ಪ್ರತಿಯೊಂದನ್ನು ಕೈಯಲ್ಲಿ ಹಿಡಿದಿರುವುದು ಸುರಕ್ಷತೆಯ ಅನುಭವ ನೀಡಿದೆ ಎಂದು ಹೇಳಿದ್ದಾರೆ.
"ಧಾರ್ಮಿಕ ಗ್ರಂಥವನ್ನುಹಿಡಿಯುವ ಉದ್ದೇಶ ನನಗಿಲ್ಲವಾಗಿತ್ತಾದರೂ ನಾನು ಅದನ್ನು ಹಾಗೆಯೇ ಕೈಯಲ್ಲಿ ಹಿಡಿದಿದ್ದೆ. ಆದರೆ, ಅಮೇರಿಕಾದ ಜನರಿಗೆ ಅದು ಇಷ್ಟವಾಗಿಲ್ಲ ಹಾಗೂ ಅದಕ್ಕಾಗಿ ಅವರು ಹಲವಾರು ಕೆಟ್ಟ ಪದಗಳನ್ನು ಉಪಯೋಗಿಸಿದರು’’ ಎಂದು ಲಿಂಡ್ಸೆ ಹೇಳಿದ್ದಾರೆ.
ತಾನು ಇಸ್ಲಾಮಿಕ್ ಧರ್ಮಾನುಸಾರ ಪ್ರಾರ್ಥನೆ ಸಲ್ಲಿಸಿದ್ದಾಗಿ ಹಾಗೂ ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ‘‘ಕುವೈತ್ ನಲ್ಲಿ ನನ್ನ ಗೆಳೆಯರೊಬ್ಬರ ಜತೆ ರಮಝಾನ್ ಉಪವಾಸವನ್ನು ಮೂರು ದಿನ ಆಚರಿಸಿದೆ ಅದು ಕಷ್ಟವಾದರೂ ನನಗೆ ಒಳ್ಳೆಯ ಅನುಭವವಾಯಿತು’’ ಎಂದಿದ್ದಾರೆ.
ತಾನೀಗಾಗಲೇ ಕುರ್ ಆನ್ ನ 15 ಪುಟಗಳನ್ನು ಇಂಗ್ಲಿಷ್ ನಲ್ಲಿ ಓದಿರುವುದಾಗಿ ಹಾಗೂ ಕೆಲವೊಂದು ಅಧ್ಯಾಯಗಳನ್ನು ಅರಬಿಕ್ ಭಾಷೆಯಲ್ಲಿ ಬರೆಯಲು ಅಭ್ಯಾಸ ಮಾಡುತ್ತಿರುವುದಾಗಿಯೂ ತಿಳಿಸಿದರಲ್ಲದೆ ಆ್ಯಪ್ ಒಂದರ ಮುಖಾಂತರ ತಾನು ಕುರ್‌ಆನ್ ಪಠನವನ್ನು ತನ್ನ ಮೊಬೈಲ್ ನಲ್ಲಿ ಕೇಳುತ್ತಿರುವುದಾಗಿಯೂ ಲಿಂಡ್ಸೆ ಹೇಳಿದ್ದಾರೆ.
ಕುರ್ ಆನ್ ಓದಿ ಹೇಗಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಲಿಂಡ್ಸೆ ‘‘ಶಾಂತಿಯ ಅನುಭವವಾಯಿತು’’ ಎಂದಿದ್ದಾರೆ.