ಟ್ರಂಪ್ ಓರ್ವ ವಂಚಕ: ಬರ್ನೀ ಸ್ಯಾಂಡರ್ಸ್
ವಾಶಿಂಗ್ಟನ್, ಫೆ. 6: ತನ್ನ ಚುನಾವಣಾ ವಾಗ್ದಾನಗಳನ್ನು ಉಲ್ಲಂಘಿಸಿ ತನ್ನ ಸಂಪುಟದಲ್ಲಿ ಬಿಲಿಯಾಧೀಶರನ್ನೇ ಪ್ರತಿಷ್ಠಾಪಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಓರ್ವ ‘ವಂಚಕ’ ಎಂದು ಸೆನೆಟರ್ ಬರ್ನೀ ಸ್ಯಾಂಡರ್ಸ್ ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಲು ಸ್ಯಾಂಡರ್ಸ್, ಹಿಲರಿ ಕ್ಲಿಂಟನ್‌ಗೆ ಸ್ಪರ್ಧೆ ನೀಡಿದ್ದರು. ವಾಲ್ ಸ್ಟ್ರೀಟ್ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ವಿರುದ್ಧ ಹೋರಾಡುವ ಭರವಸೆಯನ್ನು ಅವರು ತನ್ನ ಪ್ರಚಾರದ ವೇಳೆ ನೀಡಿದ್ದರು.
‘‘ಟ್ರಂಪ್ ವಾಲ್ ಸ್ಟ್ರೀಟ್‌ನ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ವಾಲ್ ಸ್ಟ್ರೀಟ್ ಜನರೊಂದಿಗೆ ಟ್ರಂಪ್‌ರನ್ನು ನೋಡುವಾಗ ನಗದೆ ಇರಲು ಕಷ್ಟವಾಗುತ್ತದೆ’’ ಎಂದು ರವಿವಾರ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
‘‘ನನಗೆ ಟ್ರಂಪ್‌ರನ್ನು ಅಗೌರವಿಸುವ ಉದ್ದೇಶವಿಲ್ಲ. ಆದರೆ, ಈ ವ್ಯಕ್ತಿ ಓರ್ವ ವಂಚಕ. ‘ನಾನು ಡೊನಾಲ್ಡ್ ಟ್ರಂಪ್. ನಾನು ವಾಲ್ ಸ್ಟ್ರೀಟ್‌ನ್ನು ಎದುರು ಹಾಕಿಕೊಳ್ಳುತ್ತೇನೆ. ಅಲ್ಲಿನ ಜನರು ಕೊಲೆ ಮಾಡಿಯೂ ನುಣುಚಿಕೊಳ್ಳುತ್ತಾರೆ’ ಎಂದು ಹೇಳುತ್ತಾ ಅವರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು. ಬಳಿಕ, ಒಮ್ಮೆಲೆ ಅವರು ಅಲ್ಲಿನ ಬಿಲಿಯಾಧೀಶರನ್ನೆಲ್ಲಾ ತನ್ನ ಸಂಪುಟದಲ್ಲಿ ಸೇರಿಸಿಕೊಂಡರು’’ ಎಂದರು.
ಟ್ರಂಪ್‌ರ ಸಂಪುಟ ಸದಸ್ಯರೆಲ್ಲ ಸ್ವಘೋಷಿತ ಮಿಲಿಯಾಧೀಶರು ಹಾಗೂ ವಾಲ್ ಸ್ಟ್ರೀಟ್‌ನೊಂದಿಗೆ ಅವರು ಸಂಪರ್ಕ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಉದಾಹರಣೆಗೆ, ಅವರ ನಿಯೋಜಿತ ಖಜಾನೆ ಕಾರ್ಯದರ್ಶಿ ಸ್ಟೀವನ್ ನಕಿನ್, ಗೋಲ್ಡ್‌ಮನ್ ಸ್ಯಾಕ್ಸ್‌ನ ಮಾಜಿ ಪಾಲುದಾರರು.
ಕುಖ್ಯಾತ ಹಣಕಾಸು ಸಂಸ್ಥೆ ಗೋಲ್ಡ್‌ಮನ್ ಸ್ಯಾಕ್ಸ್‌ನ ಅಧ್ಯಕ್ಷ ಗ್ಯಾರಿ ಕಾನ್‌ರನ್ನೂ ಟ್ರಂಪ್ ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕರಾಗಿ ನೇಮಿಸಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಟ್ರಂಪ್‌ರ ಇನ್ನೊಂದು ವಿವಾದಾತ್ಮಕ ಆಯ್ಕೆ. ಇಂಧನ ದೈತ್ಯ ಎಕ್ಸಾನ್‌ಮೊಬಿಲ್‌ನ ಮಾಜಿ ಸಿಇಒ ಆಗಿರುವ ಟಿಲರ್‌ಸನ್ 400 ಮಿಲಿಯ ಡಾಲರ್ (ಸುಮಾರು 2,688 ಕೋಟಿ ರೂ.)ಗೂ ಅಧಿಕ ಸಂಪತ್ತನ್ನು ಘೋಷಿಸಿದ್ದಾರೆ.
ಶಿಕ್ಷಣ ಇಲಾಖೆಯ ಉಸ್ತುವಾರಿಯಾಗಿ ಟ್ರಂಪ್ ನೇಮಿಸಿರುವ ಬೆಟ್ಸಿ ಡೆವೋಸ್ ಬಿಲಿಯಾಧೀಶೆಯಾಗಿದ್ದಾರೆ. ಆದರೆ, ತನ್ನ ಸಂಪೂರ್ಣ ಸಂಪತ್ತನ್ನು ಬಹಿರಂಗಪಡಿಸಿಲ್ಲ ಎನ್ನುವ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.
ಟ್ರಂಪ್‌ರ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಹೂಡಿಕೆದಾರ ಹಾಗೂ ಮಾಜಿ ಬ್ಯಾಂಕರ್ ಆಗಿದ್ದಾರೆ.