ನ್ಯಾಯಾಂಗದಿಂದ ಅಮೆರಿಕನ್ನರಿಗೆ ಅಪಾಯ : ನ್ಯಾಯಾಲಯ ವ್ಯವಸ್ಥೆಯ ಮೇಲೆ ಟ್ರಂಪ್ ದಾಳಿ
ಪಾಮ್ ಬೀಚ್ (ಅಮೆರಿಕ), ಫೆ. 6: ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸುವ ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ನ್ಯಾಯಾಲಯಗಳ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸತತ ಎರಡನೆ ದಿನವೂ ಕಿಡಿಗಾರಿದರು. ನ್ಯಾಯಾಂಗವು ಅಮೆರಿಕನ್ನರನ್ನು ‘ಅಪಾಯ’ಕ್ಕೆ ಗುರಿಪಡಿಸಬಹುದು ಎಂದು ಅವರು ಎಚ್ಚರಿಸಿದರು.
‘‘ನ್ಯಾಯಾಧೀಶರೊಬ್ಬರು ನಮ್ಮ ದೇಶವನ್ನು ಇಂಥ ಅಪಾಯಕ್ಕೆ ಗುರಿಪಡಿಸಬಲ್ಲರು ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಏನಾದರೂ ಸಂಭವಿಸಿದರೆ ಅವರನ್ನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಹೊಣೆ ಮಾಡಿ. ಜನರು (ನಿರಾಶ್ರಿತರು) ಹರಿದು ಬರುತ್ತಿದ್ದಾರೆ. ಕೆಟ್ಟದು’’ ಎಂದು ಅಧ್ಯಕ್ಷರು ಟ್ವೀಟ್ ಮಾಡಿದರು.
‘‘ನಮ್ಮ ದೇಶಕ್ಕೆ ಬರುತ್ತಿರುವ ಜನರನ್ನು ಅತ್ಯಂತ ಜಾಗರೂಕತೆಯಿಂದ ತಪಾಸಣೆ ಮಾಡುವಂತೆ ನಾನು ಆಂತರಿಕ ಭದ್ರತಾ ಸಚಿವಾಲಯಕ್ಕೆ ಸೂಚಿಸಿದ್ದೇನೆ. ನ್ಯಾಯಾಲಯಗಳು ಈ ಕೆಲಸವನ್ನು ಕಠಿಣಗೊಳಿಸುತ್ತಿವೆ’’ ಎಂದು ಅವರು ಹೇಳಿದ್ದಾರೆ.
ಜನವರಿ 27ರಂದು ಆದೇಶವೊಂದನ್ನು ಹೊರಡಿಸಿದ ಟ್ರಂಪ್, ಎಲ್ಲ ನಿರಾಶ್ರಿತರು ಮತ್ತು ಇರಾಕ್, ಇರಾನ್, ಯಮನ್, ಸುಡಾನ್, ಸಿರಿಯ, ಲಿಬಿಯ ಮತ್ತು ಸೊಮಾಲಿಯ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸಿದರು.
ಇದು ಜಾಗತಿಕ ಆಕ್ರೋಶಕ್ಕೆ ಕಾರಣವಾಯಿತು. ಅಮೆರಿಕ ಹಾಗೂ ಇತರ ದೇಶಗಳ ವಿವಿಧ ನಗರಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಜನರು ಬೃಹತ್ ಪ್ರತಿಭಟನೆಗಳನ್ನು ಮಾಡಿದರು.
ಶುಕ್ರವಾರ, ಸಿಯಾಟಲ್‌ನ ಫೆಡರಲ್ ನ್ಯಾಯಾಧೀಶ ಜೇಮ್ಸ್ ರೋಬರ್ಟ್, ಟ್ರಂಪ್‌ರ ಮುಸ್ಲಿಮ್ ನಿಷೇಧ ಆದೇಶಕ್ಕೆ ದೇಶವ್ಯಾಪಿ ತಡೆಯಾಜ್ಞೆ ನೀಡಿದರು.
ಇದನ್ನು ಸಹಿಸದ ಟ್ರಂಪ್ ‘ಈ ತಥಾಕಥಿತ ನ್ಯಾಯಾಧೀಶರ’ ತೀರ್ಪು ‘ಹಾಸ್ಯಾಸ್ಪದ’ ಎಂದು ಟ್ವಿಟರ್‌ನಲ್ಲಿ ಬಣ್ಣಿಸಿದರು.
ಇದನ್ನು ಖಂಡಿಸಿದ ಡೆಮಾಕ್ರಟಿಕ್ ಸೆನೆಟರ್ ಪ್ಯಾಟ್ರಿಕ್ ಲೀಹಿ, ಟ್ರಂಪ್ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದಂತೆ ಕಂಡುಬರುತ್ತದೆ ಎಂದು ಹೇಳಿದರು.
ಬಳಿಕ ರವಿವಾರ, ತಡೆಯಾಜ್ಞೆ ತೀರ್ಪಿನ ವಿರುದ್ಧ ಸರಕಾರ ಸಲ್ಲಿಸಿದ ಮೇಲ್ಮನವಿಯೊಂದನ್ನು ತಿರಸ್ಕರಿಸಿದ ಮೇಲ್ಮನವಿ ನ್ಯಾಯಾಧೀಶರೊಬ್ಬರು, ತಡೆಯಾಜ್ಞೆಯನ್ನು ತಕ್ಷಣಕ್ಕೆ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.