ಜಾತ್ಯತೀತ ಮತ ವಿಂಗಡಣೆಯಾಗದಿರಲಿ: ಜಮಾಅತೆ ಇಸ್ಲಾಮೀ ಹಿಂದ್
ಹೊಸದಿಲ್ಲಿ, ಫೆ. 6: ಜಾತ್ಯತೀತ ಮತ ಚಲಾವಣೆಗೆ ಬೆಂಬಲ ಸೂಚಿಸಿರುವ ಜಮಾಅತೆ ಇಸ್ಲಾಮೀ ಹಿಂದ್‌ನ ಅಖಿಲ ಭಾರತ ಅಧ್ಯಕ ಮೌಲಾನ ಸಯ್ಯದ್ ಜಲಾಲುದ್ದೀನ್ ಉಮರಿ ಅವರು ಮುಂಬರುವ ಚುನಾವಣೆಗಳಲ್ಲಿ ದೇಶದ ಸಕಲ ಜನತೆಯು ಜಾತ್ಯತೀತ ಮತಚಲಾವಣೆಗೆ ಬೆಂಬಲ ನೀಡಬೇಕು ಮತ್ತು ಕೋಮು ಧ್ರುವೀಕರಣಾತ್ಮಕ ಧೋರಣೆಗಳಿಗೆ ಸರಿಯಾದ ಪಾಠ ಕಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಮುಸ್ಲಿಮರು ಮಾತ್ರವಲ್ಲ, ಸಕಲ ದೇಶ ಬಾಂಧವರೂ ಜಾತ್ಯತೀತ ಮತ ಹರಿಹಂಚಿ ಹೋಗುವುದನ್ನು ತಡೆಗಟ್ಟಬೇಕು ಮತ್ತು ಉತ್ತಮ ಹಿನ್ನೆಲೆಯುಳ್ಳ ಜನಪರ ಕಾಳಜಿಯನ್ನು ಹೊಂದಿದ ಜಾತ್ಯತೀತ ನಾಯಕರನ್ನು ಆಯ್ಕೆ ಮಾಡಲು ಮುಂದಡಿ ಇಡಬೇಕು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಚುನಾವಣೆಗಳ ಕುರಿತು ಪ್ರಶ್ನಿಸಿದಾಗ ಮೌಲಾನಉಮರಿಯವರು, ನಾವೀೀಗ ಪರಿಸ್ಥಿತಿಗಳ ಅಧ್ಯಯನವನ್ನು ನಡೆಸುತ್ತಿದ್ದೇವೆ. ನಮ್ಮ ಬೆಂಬಲವನ್ನು ಶೀಘ್ರವೇ ತಿಳಿಸಲಿದ್ದೇವೆ. ನಾಯಕರನ್ನು ಆಯ್ದು ಕೊಳ್ಳುವ ಪ್ರಕ್ರಿಯೆಯು ಅವರ ಜಾತ್ಯತೀತ ಮನೋಭಾವ ಮತ್ತು ಕೋಮುವಾದಿ ನಾಯಕರನ್ನು ಸೋಲಿಸಲಿರುವ ಸಾಮರ್ಥ್ಯದ ಮೇಲೆ ನಿರ್ಧರಿಸಲಾಗುವುದು. ರಾಮ ಮಂದಿರ ಮತ್ತು ತಲಾಕ್‌ನಂತಹ ವಿಷಯಗಳನ್ನು ಮುಂದಿರಿಸಿಕೊಂಡು ಚುನಾವಣಾ ಪ್ರಚಾರ ನಡೆಸುತ್ತಿರುವುದು ಅಚ್ಚರಿಯ ವಿಷಯವಾಗಿದೆ. ಆದರೆ ಜನರು ಎದುರಿಸುತ್ತಿರುವ ಬಡತನ, ಭ್ರಷ್ಟಾಚಾರ, ಹಣದುಬ್ಬರ, ನಿರುದ್ಯೋಗಗಳ ಕುರಿತು ಕಾಳಜಿ ಇಲ್ಲದಿರುವುದು ಎದ್ದು ಕಾಣುತ್ತಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲೀಮ್ ಎಂಜಿನಿಯರ್ ಮಾತನಾಡಿ, ಕೇಂದ್ರ ಬಜೆಟ್‌ನ ನೋಟು ಅಮಾನ್ಯದಿಂದಾಗಿರುವ ತೊಂದರೆಗಳ ನಿವಾರಣೆಗೆ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದನ್ನು ಗಮನಿಸಿದ್ದೇವೆ. ಈಗಾಗಲೇ ಜಾಗತಿಕವಾಗಿಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದೆ. ಶಿಕ್ಷಣರಂಗವನ್ನು ಶೇ.6 ಜಿಡಿಪಿಗೆ ಮತ್ತು ಆರೋಗ್ಯ ರಂಗವನ್ನು ಶೇ. 3 ಜಿಡಿಪಿಗೆ ಸರಕಾರವು ಏರಿಸಬೇಕಿತ್ತು. ಆದರೆ ಅದು ಆ ಹಂತಕ್ಕಿಂತ ಕೆಳಮಟ್ಟದಲ್ಲಿದೆ. ಜಮಾಅತ್ ಬಡ್ಡಿ ರಹಿತ ಸಾಲವನ್ನು ರೈತರಿಗೆ ಮಂಜೂರು ಮಾಡುವಂತೆ ಮನವಿ ಮಾಡಿತ್ತು ಎಂದರು.
ಅಮೇರಿಕದಲ್ಲಿ ಮುಸ್ಲಿಮರ ಮೇಲೆ ಹೇರಲಾದ ನಿರ್ಬಂಧದ ಕುರಿತು ಟ್ರಂಪ್ ಸರಕಾರದ ಧೋರಣೆಯನ್ನು ವಿರೋಧಿಸಿದ ಅವರು ಅಮೇರಿಕ ಧರ್ಮದ ಆಧಾರದಲ್ಲಿ ತಾರತಮ್ಯ ಧೋರಣೆಯನ್ನು ನಡೆಸುತ್ತಿದೆ. ಇದು ಜಾಗತಿಕ ಶಾಂತಿಗೆ ಧಕ್ಕೆಯುಂಟು ಮಾಡುವಂತಹದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಅಮೇರಿಕದ ಈ ನಡೆಯು ಆಶ್ಚರ್ಯಕರ. ಮಾತ್ರವಲ್ಲ, ಮುಸ್ಲಿಮರನ್ನು ವಿರೋಧಿಸುವ ಮೂಲಕ ಜಾಗತಿಕ ಶಾಂತಿಗೆ ಧಕ್ಕೆ ಬರಿಸುವಂತಹ ಹಾಗೂ ಸಾರ್ವತ್ರಿಕ ಸಮಾನತೆ ಮತ್ತು ನ್ಯಾಯಕ್ಕೆ ಕಳಂಕವನ್ನು ತಂದಿರಿಸಿದೆ ಎಂದು ಅವರು ಟ್ರಂಪ್ ಸರಕಾರದ ಧೋರಣೆಯನ್ನು ಖಂಡಿಸಿದರು.