ಸಿರಿಯ: ಜೈಲಿನಲ್ಲಿ 13,000 ಮಂದಿಗೆ ಗಲ್ಲು

Update: 2017-02-07 15:09 GMT

ಬೆರೂತ್, ಫೆ. 7: ಸಿರಿಯದಲ್ಲಿ 2011ರಲ್ಲಿ ಬಂಡಾಯ ಆರಂಭಗೊಂಡ ಬಳಿಕ ಆ ದೇಶದ ಅಧಿಕಾರಿಗಳು ಉತ್ತರ ಡಮಾಸ್ಕಸ್‌ನ ಜೈಲೊಂದರಲ್ಲಿ 13,000 ಅಥವಾ ಅದಕ್ಕೂ ಹೆಚ್ಚಿನ ಜನರನ್ನು ಗಲ್ಲಿಗೇರಿಸಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಮಂಗಳವಾರ ಹೇಳಿದೆ.

‘ಕಸಾಯಿಖಾನೆ’ ಎಂಬುದಾಗಿ ಕರೆಯಲ್ಪಡುವ ಸೈಡ್ನಾಯ ಜೈಲಿನಲ್ಲಿ ಪ್ರತಿ ವಾರ 20ರಿಂದ 50 ಮಂದಿಯನ್ನು ಗಲ್ಲಿಗೇರಿಸಲಾಗುತ್ತಿತ್ತು ಎಂದು ನೂತನ ವರದಿಯೊಂದರಲ್ಲಿ ಆ್ಯಮ್ನೆಸ್ಟಿ ತಿಳಿಸಿದೆ. ಈ ರೀತಿಯ ಮರಣ ದಂಡನೆಗೆ ಅಧ್ಯಕ್ಷ ಬಶರ್ ಅಸ್ಸಾದ್‌ರ ಉಪಾಧ್ಯಕ್ಷರು ಸೇರಿದಂತೆ ಹಿರಿಯ ಅಧಿಕಾರಿಗಳಿಂದ ಅನುಮೋದನೆ ದೊರೆಯುತ್ತಿತ್ತು ಹಾಗೂ ಸೇನಾ ಪೊಲೀಸರು ಮರಣ ದಂಡನೆಯನ್ನು ಜಾರಿಗೆ ತರುತ್ತಿದ್ದರು ಎಂದು ವರದಿ ಹೇಳಿದೆ.

ಇದು ನ್ಯಾಯಾಂಗೇತರ ಹತ್ಯಾ ಅಭಿಯಾನದ ಒಂದು ಭಾಗವಾಗಿದೆ ಎಂದು ವರದಿ ಉಲ್ಲೇಖಿಸಿದೆ.

1980ರ ದಶಕದ ಬಳಿಕ ಸಿರಿಯದಲ್ಲಿ ಅನುಸರಿಸಿಕೊಂಡು ಬರಲಾಗುತ್ತಿರುವ 35 ಮಾದರಿಯ ಚಿತ್ರಹಿಂಸೆಗಳನ್ನು ಆ್ಯಮ್ನೆಸ್ಟಿ ದಾಖಲಿಸಿದೆ. 2011ರ ಬಳಿಕ ಚಿತ್ರಹಿಂಸೆಗಳು ಆ ದೇಶದಲ್ಲಿ ವೃದ್ಧಿಯಾಯಿತು ಎಂದು ಬೆರೂತ್‌ನಲ್ಲಿರುವ ಆ್ಯಮ್ನೆಸ್ಟಿಯ ಪ್ರಾದೇಶಿಕ ಕಚೇರಿಯ ಸಂಶೋಧನಾ ಉಪ ನಿರ್ದೇಶಕ ಲಿನ್ ಮಾಲೂಫ್ ಹೇಳಿದ್ದಾರೆ.

ಸಿರಿಯದ ಜೈಲುಗಳಲ್ಲಿ ಅನುಸರಿಸಲಾಗುತ್ತಿರುವ ಇತರ ಹಿಂಸಾ ವಿಧಾನಗಳಿಗೆ ಪುರಾವೆಗಳನ್ನು ಇತರ ಮಾನವಹಕ್ಕು ಗುಂಪುಗಳು ಪತ್ತೆಹಚ್ಚಿವೆ. ಈ ರೀತಿಯ ಹಿಂಸೆಗಳಿಗೆ ಒಳಗಾದ ಜನರು ಅಂತಿಮವಾಗಿ ಸಾವನ್ನಪ್ಪುತ್ತಾರೆ.

2011ರ ಬಳಿಕ ಸಿರಿಯದಾದ್ಯಂತ ಭದ್ರತಾ ಪಡೆಗಳ ಕಸ್ಟಡಿಯಲ್ಲಿ ಹಿಂಸೆ ಅನುಭವಿಸಿ 17,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಕಳೆದ ವರ್ಷದ ವರದಿಯಲ್ಲಿ ಆ್ಯಮ್ನೆಸ್ಟಿ ಹೇಳಿತ್ತು.

ಇದು ಅಲೆಪ್ಪೊದ ಯುದ್ಧಭೂಮಿಯಲ್ಲಿ ಸತ್ತವರ ಸಂಖ್ಯೆಗೆ ಸಮಗಟ್ಟುತ್ತದೆ. ಅಲ್ಲಿ 2011ರ ಬಳಿಕ ಸುಮಾರು 21,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News