×
Ad

ಸರ್ಜಿಕಲ್ ದಾಳಿಯ ಯಶಸ್ಸಿನ ಶ್ರೇಯ ಆರ್‌ಎಸ್‌ಎಸ್‌ಗೆ ನೀಡಿದ್ದಕ್ಕೆ ಆಕ್ಷೇಪ: ಪಾರಿಕ್ಕರ್ ಮೇಲೆ ಮುಗಿಬಿದ್ದ ವಿಪಕ್ಷಗಳು

Update: 2017-02-07 22:13 IST

ಹೊಸದಿಲ್ಲಿ, ಫೆ.7: ಸರ್ಜಿಕಲ್ ದಾಳಿಯ ಯಶಸ್ಸಿಗೆ ಆರ್‌ಎಸ್‌ಎಸ್ ಚಿಂತನೆಯ ಪ್ರೇರಣೆ ಕಾರಣ ಎಂದು ಈ ಹಿಂದೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ನೀಡಿದ ಹೇಳಿಕೆಯ ಬಗ್ಗೆ ವಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ರಾಜ್ಯಸಭೆಯಲ್ಲಿ ನಡೆಯಿತು.

ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಶಾಂತಾರಾಮ ನಾಕ್ ವಿಷಯ ಪ್ರಸ್ತಾವಿಸಿದಾಗ ಅವರಿಗೆ ಜೆಡಿಯು ಮುಖಂಡ ಶರದ್ ಯಾದವ್ ಸೇರಿದಂತೆ ಇತರ ಕೆಲ ಸದಸ್ಯರ ಬೆಂಬಲ ವ್ಯಕ್ತವಾಯಿತು. ಈ ಹಿಂದೆ ನೀಡಿದ್ದ ಹೇಳಿಕೆಯಲ್ಲಿ ಪಾರಿಕ್ಕರ್, ಸರ್ಜಿಕಲ್ ದಾಳಿಯ ಯಶಸ್ಸಿಗೆ ಆರ್‌ಎಸ್‌ಎಸ್ ಸಿದ್ಧಾಂತದ ಪ್ರೇರಣೆ ಕಾರಣ ಎಂದಿದ್ದರು. ಇನ್ನೊಂದು ಹೇಳಿಕೆಯಲ್ಲಿ ಭಾರತವು ಈ ಹಿಂದೆ ಇಂತಹ ದಾಳಿ ನಡೆಸಿಲ್ಲ ಎಂದಿದ್ದರು.

  ಇದನ್ನು ಪ್ರಸ್ತಾವಿಸಿದ ನಾಕ್, ಕಾರ್ಯನೀತಿಯ ಹೇಳಿಕೆಯನ್ನು ಸಂಸತ್ತಿನ ಹೊರಗೆ ನೀಡುವಂತಿಲ್ಲ ಎಂದರು. ಭಾರತ ಈ ಹಿಂದೆ ಇಂತಹ ದಾಳಿ ನಡೆಸಿಲ್ಲ ಎಂದು ಸಚಿವರು ಸುಳ್ಳು ಹೇಳಿಕೆ ನೀಡಿದ್ದಾರೆ. ಆದರೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ ಭಾರತೀಯ ಸೇನೆ ಈ ಹಿಂದಿನ ಪೂರ್ವ ಪಾಕಿಸ್ತಾನಕ್ಕೆ ನುಗ್ಗಿ ಪಾಕಿಸ್ತಾನವನ್ನು ವಿಭಜಿಸಿ ಬಾಂಗ್ಲಾದೇಶ ರಚನೆಯಾಗಲು ಕಾರಣವಾಗಿತ್ತು ಎಂಬುದನ್ನು ಪಾರಿಕ್ಕರ್ ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು. ಸರ್ಜಿಕಲ್ ದಾಳಿಯ ಯಶಸ್ಸಿಗೆ ಆರ್‌ಎಸ್‌ಎಸ್ ಸಿದ್ಧಾಂತದ ಪ್ರೇರಣೆ ಕಾರಣ ಎನ್ನುವ ಮೂಲಕ ದೇಶದ ಧೀರ ಸೈನಿಕರನ್ನು ಅಪಮಾನಿಸಿದ್ದಾರೆ. ಕೆಟ್ಟ ಅಭಿರುಚಿಯಿಂದ ವ್ಯಾಖ್ಯಾನಿಸಲಾದ ಹೇಳಿಕೆಯ ಮೂಲಕ ಪಾರಿಕ್ಕರ್ ದೇಶವನ್ನು ಗೇಲಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

  ದೇಶದ ಪರಮಾಣು ನೀತಿಯ ಬಗ್ಗೆ ಇತ್ತೀಚೆಗೆ ಪಾರಿಕ್ಕರ್ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ನಾಕ್, ಪಾರಿಕ್ಕರ್ ನೀಡಿದ ವೈಯಕ್ತಿಕ ಹೇಳಿಕೆ - ಮೊದಲು ಬಳಕೆ ಇಲ್ಲ- ಎಂಬ ಪರಮಾಣು ನೀತಿಗೆ ವಿರುದ್ಧವಾಗಿದೆ. ಸಚಿವರ ಈ ಹೇಳಿಕೆಗೆ ಹಲವರಿಂದ ವಿರೋಧ ವ್ಯಕ್ತವಾಗಿದೆ ಎಂದರು. ರಕ್ಷಣಾ ಸಚಿವರು ಆಕ್ರಮಣಕಾರೀ ನಿಲುವು ತೋರುತ್ತಿದ್ದಾರೆ. ಆದರೆ ಸರಕಾರ ಪಠಾಣ್‌ಕೋಟ್ ವಾಯುನೆಲೆಯ ಸೂಕ್ಷ್ಮ ಪ್ರದೇಶಕ್ಕೆ ಭೇಟಿ ನೀಡಲು ಪಾಕ್ ನಿಯೋಗಕ್ಕೆ ಅನುಮತಿ ನೀಡುವ ಮೂಲಕ ತದ್ವಿರುದ್ದ ನಿಲುವು ತಳೆದಿದೆ. ಗಡಿಭಾಗದಲ್ಲಿ ಪಾಕಿಸ್ತಾನ ನಮ್ಮ ಸೇನಾ ನೆಲೆಯ ಮೇಲೆ ಹಲವಾರು ಆಕ್ರಮಣ ನಡೆಸಿದೆ. ಆದರೆ ನಾವು ಒಂದು ಸರ್ಜಿಕಲ್ ದಾಳಿಯ ಯಶಸ್ಸಿನಿಂದ ತೃಪ್ತರಾಗಿದ್ದೇವೆ ಎಂದವರು ತೀವ್ರ ವಾಗ್ದಾಳಿ ನಡೆಸಿದರು.

   ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಮುಖಂಡ ಆನಂದ್ ಶರ್ಮ, ಸಂಸತ್ ಅಧಿವೇಶನ ನಡೆಯುತ್ತಿರುವಾಗ ಸಂಸತ್ತಿನ ಹೊರಗೆ ಕಾರ್ಯನೀತಿಯ ವಿಷಯದ ಬಗ್ಗೆ ಹೇಳಿಕೆ ನೀಡದಂತೆ ರಕ್ಷಣಾ ಸಚಿವರಿಗೆ ಸರಕಾರ ತಿಳಿಹೇಳಬೇಕು ಎಂದರು. ಇದು ಗಂಭೀರ ವಿಷಯವಾಗಿರುವ ಕಾರಣ ರಕ್ಷಣಾ ಸಚಿವರು ಉತ್ತರ ನೀಡಬೇಕು ಎಂದು ಕಾಂಗ್ರೆಸ್‌ನ ಸತ್ಯವೃತ ಚತುರ್ವೇದಿ, ಜೆಡಿಯು ಮುಖಂಡ ಶರದ್ ಯಾದವ್ ಆಗ್ರಹಿಸಿದರು. ಈ ಸಂದರ್ಭ ಪಾರಿಕ್ಕರ್ ರಾಜ್ಯಸಭೆಯಲ್ಲಿ ಉಪಸ್ಥಿತರಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

   ಉತ್ತರ ನೀಡಬೇಕೆಂದು ತಾನು ಸಚಿವರನ್ನು ಕೇಳುವಂತಿಲ್ಲ ಎಂದು ಉಪಸಭಾಪತಿ ಪಿ.ಜೆ.ಕುರಿಯನ್ ಹೇಳಿದರು.ಈ ವೇಳೆ ಧ್ವನಿ ಎತ್ತಿದ ಆಡಳಿತ ಪಕ್ಷದ ಸದಸ್ಯರು, ವಿಪಕ್ಷಗಳು ಹುರುಳಿಲ್ಲದ ವಿಷಯಗಳನ್ನು ಎತ್ತುತ್ತಿದ್ದಾರೆ. ವಿಪಕ್ಷ ಸದಸ್ಯರು ಇತರ ಸದಸ್ಯರ ಸಮಯವನ್ನು ಬಳಸಿಕೊಳ್ಳಲು ಅವಕಾಶ ನೀಡಬಾರದು ಎಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News