ಶಶಿಕಲಾ ವಿರುದ್ಧ ಸೆಲ್ವಂ ದಂಗೆ
ಚೆನ್ನೈ, ಫೆ.7: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ಹಾಲಿ ಮುಖ್ಯ ಮಂತ್ರಿ ಓ. ಪನ್ನೀರ್ ಸೆಲ್ವಂ ಅವರು ಎಐಎಡಿಎಂಕೆಯ ಅಧಿನಾಯಕಿ ಶಶಿಕಲಾ ನಟರಾಜನ್ ವಿರುದ್ಧ ದಂಗೆ ಎದ್ದಿದ್ದಾರೆ.
ಮುಖ್ಯ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಂತೆ ಶಶಿಕಲಾ ಬಣ ಒತ್ತಡ ಹೇರಿತ್ತು ಎಂದು ಸೆಲ್ವಂ ಅವರು ಮಾಜಿ ಮುಖ್ಯ ಮಂತ್ರಿ ಜಯಲಲಿತಾ ಸಮಾಧಿ ಬಳಿ ಹೇಳಿಕೆ ನೀಡಿದ್ದಾರೆ.
"ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಹುದ್ದೆ ಮಧುಸೂದನ್ ಅವರಿಗೆ ನೀಡುವಂತೆ ಮತ್ತು ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಂತೆ ನನಗೆ ಜಯಲಲಿತಾ ಸೂಚಿಸಿದ್ದರು" ಎಂದು ಸೆಲ್ವಂ ಬಹಿರಂಗ ಪಡಿಸಿದ್ದಾರೆ.
"ನನಗೆ ತಿಳಿಸದೆ ಶಾಸಕರ ಸಭೆ ಕರೆದು ನನ್ನ ಪದತ್ಯಾಗಕ್ಕೆ ಸೂಚಿಸಲಾಗಿತ್ತು '' ಎಂದು ಸೆಲ್ವಂ ಆರೋಪಿಸಿದರು.
"ಸತ್ಯ ಹೇಳುವಂತೆ ಅಮ್ಮಾ ಆತ್ಮ ನನಗೆ ಸೂಚನೆ ನೀಡಿದೆ''.ಸತ್ಯ ಹೇಳಲು ಇಲ್ಲಿಗೆ ಬಂದಿರುವೆ. ಸಮಾಧಿಯ ಬಳಿ ಧ್ಯಾನದ ಬಳಿಕ ಸೆಲ್ವಂ ಹೇಳಿಕೆ ನೀಡಿದರು. "ರಾಜೀನಾಮೆ ನೀಡಲು ಶಶಿಕಲಾ ಒತ್ತಡ ಹಾಕಿದರು. ತಮಿಳುನಾಡು ಜನತೆ ಬಯಸಿದರೆ ಮತ್ತೆ ಮುಖ್ಯ ಮಂತ್ರಿಯಾಗುವೆ.ರಾಜೀನಾಮೆಯನ್ನು ಹಿಂಪಡೆಯಲು ಸಿದ್ಧ" ಎಂದು ಸೆಲ್ವಂ ಹೇಳಿದರು. 30 ನಿಮಿಷಗಳ ಕಾಲ ಸೆಲ್ವಂ ಧ್ಯಾನ ಮಾಡಿದರು.
"ಎಐಎಡಿಎಂಕೆ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವೆ. ರಾಜ್ಯದ ಜನತೆಯ ಸೇವೆ ಮುಂದುವರಿಸಲು ಸಿದ್ಧ'' ಎಂದರು.