ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮರು ಡಾಮರೀಕರಣಕ್ಕೆ ಆಗ್ರಹ

Update: 2017-02-07 18:32 GMT

ಪುತ್ತೂರು, ಫೆ.7: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಂಪುಹೊಳೆ-ಅಡ್ಡಹೊಳೆ ರಸ್ತೆಯಲ್ಲಿ 13 ಕಿ.ಮೀ. ರಸ್ತೆ ಕಾಮಗಾರಿ ಕಳೆದ ವರ್ಷ ಆರಂಭಗೊಂಡು ಇದೀಗ ಸ್ಥಗಿತಗೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. 15 ದಿನಗಳಲ್ಲಿ ಈ ರಸ್ತೆ ಮರು ಡಾಮರೀಕರಣಗೊಳಿಸದಿದ್ದಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 1ನೆ ಹಂತದಲ್ಲಿ ಕೆಂಪುಹೊಳೆ-ಹೆಗ್ಗಡೆ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ 2ನೆ ಹಂತದಲ್ಲಿ ಕೆಂಪುಹೊಳೆ-ಅಡ್ಡಹೊಳೆ ರಸ್ತೆ ಕಾಮಗಾರಿ ಆರಂಭಗೊಂಡು ಒಂದು ವರ್ಷ ಕಳೆದಿದ್ದು, ಈವರೆಗೆ ಶೇ.10ರಷ್ಟು ಕೂಡಾ ಕಾಮಗಾರಿ ನಡೆದಿಲ್ಲ. ಈ ಭಾಗದ ರಸ್ತೆ ಸಂಪೂರ್ಣ ಹೊಂಡಗಳಿಂದ ಕೂಡಿದ್ದು, ವಾಹನ ಪ್ರಯಾಣಿಕರು ಯಮಯಾತನೆ ಅನುಭವಿಸುವಂತಾಗಿದೆ ಎಂದರು.

ರಸ್ತೆಯ ದುರಸ್ತಿ ಕಾಮಗಾರಿ ಆರಂಭಿಸಿದ ಕೆಲ ಸಮಯದಲ್ಲಿಯೇ ಕಾಮಗಾರಿ ಸ್ಥಗಿತವಾಗಿದ್ದು, ಇಲ್ಲಿನ ಕಾಮಗಾರಿಯ ಪೂರ್ಣ ಗುತ್ತಿಗೆಯನ್ನು ಮೊದಲಿಗೆ ಜಿವಿಆರ್ ಎಂಬ ಕಂಪೆನಿಗೆ ನೀಡಲಾಗಿತ್ತು.

ಬಳಿಕ ದುರಸ್ತಿ ಕಾಮಗಾರಿಯನ್ನು ಮೊಗೆರೋಡಿ ಕನ್ಸಸ್ಟ್ರಕ್ಷನ್ಸ್ ಅವರಿಗೆ ನೀಡಲಾಗಿದೆ. ಮೊದಲು ಗುತ್ತಿಗೆ ಪಡೆದಿರುವ ಕಂಪೆನಿಯವರು ಇದೀಗ ಹೈಕೋರ್ಟು ಮೆಟ್ಟಲೇರಿ ದುರಸ್ತಿ ಕಾಮಗಾರಿಯನ್ನು ತಡೆಹಿಡಿದಿದ್ದಾರೆ. ಇದರಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ ಎಂದ ಅವರು, ಗುತ್ತಿಗೆದಾರರ ಗೊಂದಲದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ವೇದಿಕೆಯ ಪದಾಕಾರಿಗಳಾದ ದಾಮೋದರ ಡಿ.ಎಂ, ಪ್ರಕಾಶ್ ಗುಂಡ್ಯ ಮತ್ತು ಲಕ್ಷ್ಮೀನಾರಾಯಣ ರಾವ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News