ಎಸ್‌ಎಸ್‌ಪಿ ಸಂತ್ರಸ್ತರಿಗೆ ಪರಿಹಾರ ನೀಡಿಕೆ ಸುಗಮಗೊಳಿಸಿದ ಸುಪ್ರೀಂ
ಹೊಸದಿಲ್ಲಿ,ಫೆ.8: ಮಧ್ಯಪ್ರದೇಶದಲ್ಲಿ ನರ್ಮದಾ ನದಿಗೆ ನಿರ್ಮಾಣಗೊಳ್ಳುತ್ತಿರುವ ಸರ್ದಾರ್ ಸರೋವರ ಯೋಜನೆ(ಎಸ್‌ಎಸ್‌ಪಿ)ಯ ಸಂಭಾವ್ಯ ಸಂತ್ರಸ್ತ ಕುಟುಂಬ ಗಳಿಗೆ ತಲಾ 60 ಲ.ರೂ.ಪರಿಹಾರವನ್ನು ಬುಧವಾರ ಆದೇಶಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯವು ನಗದು ಪರಿಹಾರ ಪಾವತಿಗೆ ಅಡತಡೆಗಳನ್ನು ನಿವಾರಿಸಿದೆ.
ಇಂತಹ 681 ಕುಟುಂಬಗಳ ದೂರುಗಳನ್ನು ಬಗೆಹರಿಸಲು ಹಲವಾರು ನಿರ್ದೇಶಗಳನ್ನು ಹೊರಡಿಸಿದ ನ್ಯಾಯಾಲಯವು,ಯೋಜನೆಯ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ವಿಷಯವನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯದ ಮೂವರು ಮಾಜಿ ನ್ಯಾಯಾಧೀಶರ ಸಮಿತಿಯೊಂದನ್ನು ರಚಿಸುವ ತನ್ನ ಪ್ರಸ್ತಾವನೆಯನ್ನು ಹಿಂದೆಗೆದುಕೊಂಡಿತು.
ಎರಡು ಹೆಕ್ಟೇರ್ ಭೂಮಿಗಾಗಿ ಪ್ರತಿ ಕುಟುಂಬಕ್ಕೆ 60 ಲ.ರೂ.ನಗದು ನೀಡುವಂತೆ ಆದೇಶಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠವು, ಒಂದು ತಿಂಗಳೊಳಗೆ ಜಮೀನನ್ನು ತೆರವುಗೊಳಿಸುವ ಬಗ್ಗೆ ಈ ಕುಟುಂಬಗಳಿಂದ ಮುಚ್ಚಳಿಕೆಯನ್ನು ಪಡೆಯುವಂತೆ ನಿರ್ದೇಶ ನೀಡಿತು.
ನಿಗದಿತ ಅವಧಿಯಲ್ಲಿ ಭೂಮಿಯನ್ನು ತೆರವುಗೊಳಿಸದಿದ್ದರೆ ಬಲವಂತದಿಂದ ತೆರವುಗೊಳಿಸಲು ಅಧಿಕಾರಿಗಳು ಹಕ್ಕು ಹೊಂದಿರು ತ್ತಾರೆ ಎಂದು ಅದು ಸ್ಪಷ್ಟಪಡಿಸಿತು.