ಶಿರಿಯಾರ ಗ್ರಾಪಂ ಬರ್ಖಾಸ್ತು: ಗ್ರಾಪಂ ಅಧ್ಯಕ್ಷೆ ನ್ಯಾಯಾಲಯದ ಕಟಕಟೆಗೆ

Update: 2017-02-08 18:27 GMT

ಉಡುಪಿ, ಫೆ.8: ಗ್ರಾಪಂ ಅಧ್ಯಕ್ಷೆ ಹಾಗೂ ಸದಸ್ಯರ ನಡುವಿನ ಹೊಂದಾಣಿಕೆಯ ಕೊರತೆಯ ಹಿನ್ನೆಲೆಯಲ್ಲಿ ಗ್ರಾಪಂನ ಎಲ್ಲಾ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣದ ಮೇಲೆ ಶಿರಿಯಾರ ಗ್ರಾಪಂನ್ನು ಬರ್ಖಾಸ್ತುಗೊಳಿಸಲು ಉಡುಪಿ ಜಿಪಂ ನಿನ್ನೆ ತೆಗೆದುಕೊಂಡ ನಿರ್ಣಯವನ್ನು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪೇತ್ರಿ ಹೇಳಿದ್ದಾರೆ.

ಶಿರಿಯಾರ ಗ್ರಾಪಂನ್ನು ಬರ್ಖಾಸ್ತುಗೊಳಿಸಲು ಕಳೆದ ಕೆಲ ಸಮಯದಿಂದ ನಡೆದಿದ್ದ ಪ್ರಯತ್ನವನ್ನು ಪ್ರಶ್ನಿಸಿ ಈಗಾಗಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದೆ. ಈ ಮಾಹಿತಿಯನ್ನು ನಿನ್ನೆ ಜಿಪಂ ಸಭೆಗೆ ಮೊದಲು ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳಿಗೆ ತಿಳಿಸಲಾಗಿತ್ತು. ಆದರೂ ಕೆಲ ಸದಸ್ಯರು ಇದನ್ನು ಕಡೆಗಣಿಸಿ ತರಾತುರಿಯಿಂದ ನಿರ್ಣಯ ಪಾಸಾಗುವಂತೆ ನೋಡಿಕೊಂಡರು ಎಂದವರು ಆರೋಪಿಸಿದರು. ಜಿಪಂ ನಿರ್ಣಯದ ಪ್ರತಿಯನ್ನು ಪಡೆದು ಇನ್ನೊಂದೆರಡು ದಿನದೊಳಗೆ ಮತ್ತೆ ಹೈಕೋರ್ಟ್‌ಗೆ ಸಲ್ಲಿಸುತ್ತವೆ. ನಿರ್ಣಯಕ್ಕೆ ತಡೆಯಾಜ್ಞೆ ನೀಡುವಂತೆ ಕೋರುತ್ತೇವೆ ಎಂದರು.

ಗ್ರಾಪಂನಲ್ಲಿ ದಲಿತ ಮಹಿಳೆಯೊಬ್ಬರು ಅಧ್ಯಕ್ಷ ಸ್ಥಾನದಲ್ಲಿರುವುದನ್ನು ಸಹಿಸದ, ತಮ್ಮ ಅವ್ಯವಹಾರ ಹಾಗೂ ಭ್ರಷ್ಟಾಚಾರಗಳಿಗೆ ಅವಕಾಶ ನೀಡದ ಕಾರಣಕ್ಕಾಗಿ ಗ್ರಾಪಂನ ಕೆಲವು ಸದಸ್ಯರು, ಚುನಾಯಿತ ಗ್ರಾಪಂನ್ನು ಕಾರ್ಯನಿರ್ವಹಿಸಲು ಬಿಡದೇ, ಅದು ಬರ್ಖಾಸ್ತಾಗುವಂತೆ ನೋಡಿಕೊಂಡರು. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಮಸಿ ಬಳಿದರು ಎಂದವರು ಹೇಳಿದ್ದಾರೆ.

ಸದಸ್ಯರ ಆಟಕ್ಕೆ ಬಲಿಪಶು:  

ಶಿರಿಯಾರ ಗ್ರಾಪಂ ಅಧ್ಯಕ್ಷೆ ಜ್ಯೋತಿ ಅವರು ಜಿಪಂನ ನಿರ್ಣಯ ಸಿಂಧು ಅಲ್ಲ ಎಂದು ಪ್ರತಿಪಾದಿಸಿದ್ದಾರೆ. ದಲಿತ ಮಹಿಳೆಯಾಗಿ ಕೆಲವರ ಕೈಗೊಂಬೆಯಾಗಿ ‘ಹೆಬ್ಬೆಟ್ಟಾಗದ’ ಕಾರಣಕ್ಕಾಗಿ ವ್ಯವಸ್ಥಿತವಾಗಿ ತನ್ನನ್ನು ಕೆಳಗಿಳಿಸಲು ಈ ನಾಟಕವನ್ನು ಕಳೆದ ಐದಾರು ತಿಂಗಳಿನಿಂದ ಆಡಲಾಗಿದೆ. ಅದರ ಒಂದು ಭಾಗವಾಗಿ ನಿನ್ನೆ ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಗ್ರಾಮ ಸಭೆ ನಡೆಯಲು ಅವಕಾಶ ನೀಡದೇ, ಸಾಮಾನ್ಯ ಸಭೆಗೆ ಸರದಿಯಂತೆ ಗೈರುಹಾಜರಾಗಿ ಗ್ರಾಪಂ ನಿಗದಿಯಂತೆ ಕಾರ್ಯನಿರ್ವಹಿಸಲು ಅಡ್ಡಿ ಪಡಿಸಿದ ಕೆಲ ಸದಸ್ಯರು ತಪ್ಪುಗಾರರಾದರೆ ನನ್ನನ್ನು ಹಾಗೂ ಗ್ರಾಪಂನ್ನು ಬಲಿಪಶುವಾಗಿ ಮಾಡಲಾಗಿದೆ. ಇದರಿಂದ ಗ್ರಾಮದ ಜನತೆ ತೀವ್ರ ತೊಂದರೆಗೊಳಗಾವಂತೆ ಮಾಡಲಾಗಿದೆ ಎಂದವರು ಆರೋಪಿಸಿದ್ದಾರೆ.

ಗ್ರಾಮ ಸಭೆ  ನಡೆಯಲು ಅವಕಾಶ ನೀಡದೇ, ಸಾಮಾನ್ಯ ಸಭೆಗೆ  ಸರದಿಯಂತೆ ಗೈರು ಹಾಜರಾಗಿ ಗ್ರಾಪಂ ನಿಗದಿಯಂತೆ ಕಾರ್ಯನಿರ್ವಹಿಸಲು ಅಡ್ಡಿ ಪಡಿಸಿದ ಕೆಲ ಸದಸ್ಯರು ತಪ್ಪುಗಾರರಾದರೆ ನನ್ನನ್ನು ಹಾಗೂ ಗ್ರಾಪಂನ್ನು ಬಲಿಪಶುವಾಗಿ ಮಾಡಲಾಗಿದೆ. ಇದರಿಂದ ಗ್ರಾಮದ ಜನತೆ ತೀವ್ರ ತೊಂದರೆಗೊಳಗಾವಂತೆ  ಮಾಡಲಾಗಿದೆ ಎಂದವರು ಆರೋಪಿಸಿದ್ದಾರೆ.

ಶಿರಿಯಾರ ಗ್ರಾಪಂನಲ್ಲಿ 13 ಸದಸ್ಯರಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಆರು ಮಂದಿ, ಕಾಂಗ್ರೆಸ್ ಬೆಂಬಲಿತ ಐದು ಮಂದಿ ಹಾಗೂ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನ ದಲಿತ ಮಹಿಳೆಗೆ ಮೀಸಲಾಗಿದ್ದ ಕಾರಣ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ತಾನು ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೆ ಎಂದರು.

ಮೊದಲ ಒಂದು ವರ್ಷ ಯಾವುದೇ ವಿವಾದಗಳಿರಲಿಲ್ಲ. ತಾನು ಎರಡು ಗ್ರಾಮಸಭೆಗಳನ್ನು, ಸಾಮಾನ್ಯ ಸಭೆಗಳನ್ನು ನಡೆಸಿದ್ದೇನೆ. ಆದರೆ ಕೆಲವರು ಕಾಮಗಾರಿ ನಡೆಸದೇ ನಕಲಿ ಬಿಲ್‌ಗೆ ಸಹಿ ಮಾಡುವಂತೆ ಒತ್ತಡ ಹೇರಿದಾಗ ಅದನ್ನು ಬಲವಾಗಿ ವಿರೋಧಿ ನಿಂತಿದ್ದು, ಮುಂದಿನೆಲ್ಲಾ ಘಟನೆಗಳಿಗೆ ಕಾರಣವಾಯಿತು.

ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಅವಕಾಶ ನೀಡಲಿಲ್ಲ. ಸಾಮಾನ್ಯ ಸಭೆಯೇ ನಡೆಯದಂತೆ ನೋಡಿಕೊಂಡರು. ಪ್ರತಿ ತಿಂಗಳು ನಾನು ಸಭೆ ಕರೆದರೂ, ಅವರಲ್ಲಿ ನಿರ್ದಿಷ್ಟ ಮಂದಿ ಗೈರುಹಾಜರಾಗಿ ಕೋರಂ (7ಮಂದಿ ಬೇಕು) ಆಗದಂತೆ ನೋಡಿಕೊಂಡರು. ಗ್ರಾಪಂನ ಉಪಾಧ್ಯಕ್ಷರಾದ ಕಾಂಗ್ರೆಸ್ ಬೆಂಬಲಿತ ತುಕ್ರ ಪೂಜಾರಿ ಹಾಗೂ ಓರ್ವ ಪಕ್ಷೇತರರನ್ನು ತಮ್ಮತ್ತ ಸೆಳೆದುಕೊಂಡು ಕಳೆದ ಏಳೆಂಟು ತಿಂಗಳಿನಿಂದ ಯಾವುದೇ ಸಭೆ ನಡೆಯದಂತೆ, ಗ್ರಾಪಂ ನಿಗದಿತ ಜವಾಬ್ದಾರಿ ನಿರ್ವಹಿಸದಂತೆ ಅಡ್ಡಿಪಡಿಸಿದರು. ಇದರಿಂದ ಜನರು ತೊಂದರೆಗೆ ಸಿಲುಕಿಸಿದಾಗ ಅವರನ್ನು ನನ್ನ ವಿರುದ್ಧ ಎತ್ತಿ ಕಟ್ಟಿದರು ಎಂದು ಜ್ಯೋತಿ ಆರೋಪಿಸಿದ್ದಾರೆ.

ಕೆಲ ತಿಂಗಳ ಹಿಂದೆ ಕುಡಿಯುವ ನೀರು ಒದಗಿಸುವ ಪಂಪ್ ಹಾಳಾದಾಗ, ನಾನೇ ನನ್ನ ಕರಿಮಣಿಯನ್ನು ಅಡವಿಟ್ಟು ಅದನ್ನು ರಿಪೇರಿ ಮಾಡಿಸಿಕೊಟ್ಟಿದ್ದೆ. ಆದರೆ ಪಂಪ್ ರಿಪೇರಿಯ ಹುಡುಗನಿಗೆ ಬೆದರಿಕೆ ಹಾಕಿ ಆತ ಕೆಲಸಮಾಡಲು ಅಡ್ಡಿಪಡಿಸಿದ್ದರು. ಆಗ ಜನರನ್ನು ಎತ್ತಿ ಕಟ್ಟಿದ್ದರು. ಆದರೆ ನಾನು ಖುದ್ದು ನಿಂತು ಒಂದೇ ದಿನದಲ್ಲಿ ಜನರಿಗೆ ಮತ್ತೆ ನೀರು ಕೊಡಿಸಿದ್ದೆ ಎಂದರು.

ಕೇವಲ ತಾನು ಕೆಲವರ ತಾಳಕ್ಕೆ ಸರಿಯಾಗಿ ಕುಣಿಯದ ಕಾರಣ, ಕೆಲವರಿಗೆ ಅವ್ಯವಹಾರ ನಡೆಸಲು ಅವಕಾಶ ನೀಡದ ಕಾರಣ ನನಗೆ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ನಾನು ಯಾವುದೇ ತಪ್ಪು ಮಾಡಲಿಲ್ಲ. ಇಲ್ಲಿ ನಾನು ಕೇವಲ ಬಲಿಪಶು ಎಂದರು.

 ಕಳೆದ ನ.29ರಂದು ಜಿಪಂ ಸಾಮಾನ್ಯ ಸಭೆಯಲ್ಲಿ ಗ್ರಾಪಂ ಬರ್ಖಾಸ್ತು ಚರ್ಚೆ ನಡೆಸದಂತೆ ಒತ್ತಾಯಿಸಿ ತಾನು ಜಿಪಂ ಎದುರು ಧರಣಿ ಕುಳಿತಿದ್ದೆ. ಆದರೆ ಏನೂ ಆಗಲಿಲ್ಲ. ಎಲ್ಲಾ ದಾಖಲೆಗಳನ್ನು ತಮಗೆ ಬೇಕಾದಂತೆ ತಯಾರಿಸಿ ತಾಪಂ ಮೂಲಕ ನಿರ್ಣಯ ಮಾಡಿಸಿದ್ದಾರೆ. ಇದೀಗ ಜಿಪಂನಲ್ಲೂ ನಿರ್ಣಯ ಪಾಸಾಗಿದೆ. ಈ ಎಲ್ಲಾ ನಡೆಯ ಹಿಂದಿರುವ ವ್ಯಕ್ತಿ ಜಿಪಂ ಸದಸ್ಯರಾದ ಪ್ರತಾಪ್ ಹೆಗ್ಡೆ ಮಾರಾಳಿ ಎಂದವರು ನೇರವಾಗಿ ಆರೋಪಿಸಿದರು.

ಸದಸ್ಯರಿಂದ ಲಿಖಿತ ಒಪ್ಪಿಗೆ: 

ಗ್ರಾಪಂನ ಅಧ್ಯಕ್ಷೆ ಹಾಗೂ ಪಕ್ಷೇತರ ಸದಸ್ಯರನ್ನು ಹೊರತು ಪಡಿಸಿ, ಉಳಿದೆಲ್ಲಾ ಸದಸ್ಯರು ಗ್ರಾಪಂನ ಬರ್ಖಾಸ್ತಿಗೆ ಲಿಖಿತ ಒಪ್ಪಿಗೆ ನೀಡಿದ್ದಾರೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ  ಮೇರಿ ಪ್ರಾನ್ಸಿಸ್ ಹೇಳಿದ್ದಾರೆ. ಜಿಪಂ ನಿರ್ಣಯ ಅಂತಿಮವಾಗಿದ್ದು, ಇದು ಗಝೆಟ್ ನೋಟಿಫಿಕೇಷನ್ ಆದಾಗ ಕಾರ್ಯರೂಪಕ್ಕೆ ಬರುತ್ತದೆ. ಆದರೆ ಈ ನಡುವೆ ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ. ಆಗ ನ್ಯಾಯಾಲಯದ ತೀರ್ಪು ಬಾಧ್ಯಸ್ಥವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News