ದಿಲ್ಲಿ: ಒಂದೇ ತಿಂಗಳಲ್ಲಿ 140 ಅತ್ಯಾಚಾರ ಪ್ರಕರಣ!
ಹೊಸದಿಲ್ಲಿ, ಫೆ.8: ಈ ವರ್ಷದ ಜನವರಿ ತಿಂಗಳೊಂದರಲ್ಲಿಯೇ ದಿಲ್ಲಿ ಪೊಲೀಸರು ಅತ್ಯಾಚಾರದ 140 ಪ್ರಕರಣಗಳು ಹಾಗೂ ಲೈಂಗಿಕ ಕಿರುಕುಳದ 238 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಅವುಗಳಲ್ಲಿ 43 ಹಾಗೂ 133 ಪ್ರಕರಣಗಳು ಇತ್ಯರ್ಥವಾಗದೆ ಉಳಿದಿದೆಯೆಂದರು.
2016ರಲ್ಲಿ 2,155 ಅತ್ಯಾಚಾರದ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಅವುಗಳಲ್ಲಿ 291 ಪ್ರಕರಣಗಳು ಇತ್ಯರ್ಥಗೊಳ್ಳದೆ ಉಳಿದಿವೆ. 4,166 ಲೈಂಗಿಕ ಕಿರುಕುಳದ ಪ್ರಕರಣಗಳ ಪೈಕಿ 1,132 ಪ್ರಕರಣಗಳು ಇತ್ಯರ್ಥಗೊಂಡಿಲ್ಲವೆಂದು ರಾಜ್ಯಸಭಾ ಸದಸ್ಯ ಹಂಸ್‌ರಾಜ್ ಅಹೀರ್ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.
2014, 2015 ಹಾಗೂ 2016ರಲ್ಲಿ ದಿಲ್ಲಿ ಪೊಲೀಸ್ ಸಿಬ್ಬಂದಿಯ ವಿರುದ್ಧ 36 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 28 ಪ್ರಕರಣಗಳು ದಿಲ್ಲಿ ಹಾಗೂ 8 ಇತರ ರಾಜ್ಯಗಳಲ್ಲಿ ವರದಿಯಾಗಿದ್ದವು. ಇವುಗಳ ಪೈಕಿ ಎರಡು ಪ್ರಕರಣಗಳನ್ನು ರದ್ದುಪಡಿಸಲಾಗಿದ್ದು, ಆರು ಪ್ರಕರಣಗಳಲ್ಲಿ ಆರೋಪಿ ಪೊಲೀಸ್ ಸಿಬ್ಬಂದಿಯನ್ನು ದೋಷಮುಕ್ತಗೊಳಿಸಲಾಗಿದೆ. ಉಳಿದ 28 ಪ್ರಕರಣಗಳ ವಿಚಾರಣೆ ಬಾಕಿಯಿದೆ ಎಂದರು.
ಈ ಮೂರು ವರ್ಷಗಳಲ್ಲಿ ದಿಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧ 9 ಲೈಂಗಿಕ ಕಿರುಕುಳ ಹಾಗೂ 9 ಚುಡಾವಣೆಯ ಪ್ರಕರಣಗಳು ದಾಖಲಾಗಿವೆಯೆಂದು ಹಂಸ್‌ರಾಜ್ ಸದನಕ್ಕೆ ವಿವರಿಸಿದರು.