ಮ್ಯಾನ್ಮಾರ್ ನ ರೋಹಿಂಗ್ಯ ಮುಸ್ಲಿಮರ ಮೇಲಿನ ದಬ್ಬಾಳಿಕೆಯನ್ನು ಟೀಕಿಸಿದ ಪೋಪ್ ಫ್ರಾನ್ಸಿಸ್
ರೋಮ್, ಫೆ.9: ಮ್ಯಾನ್ಮಾರ್ ನ ರೋಹಿಂಗ್ಯ ಮುಸ್ಲಿಮರ ಮೇಲೆ ಅಲ್ಲಿನ ಭದ್ರತಾ ಪಡೆಗಳು ನಡೆಸುತ್ತಿರುವ ದೌರ್ಜನ್ಯ, ಸಾಮೂಹಿಕ ಹತ್ಯೆ ಹಾಗೂ ಅತ್ಯಾಚಾರವನ್ನು ಪೋಪ್ ಫ್ರಾನ್ಸಿಸ್ ಅವರು ಕಟುವಾಗಿ ಟೀಕಿಸಿದ್ದಾರೆ.
‘‘ರೋಹಿಂಗ್ಯ ಮುಸ್ಲಿಮರು ತಮ್ಮ ಸಂಪ್ರದಾಯದಂತೆ ಜೀವಿಸಲು ಹಾಗೂ ತಮ್ಮ ಧರ್ಮವನ್ನು ಪಾಲಿಸಲು ಬಯಸುವುದರಿಂದಲೇ ಅವರನ್ನು ಗುರಿಯಾಗಿಸಲಾಗುತ್ತಿದೆ’’ ಎಂದು ಬುಧವಾರ ತಮ್ಮ ಹೇಳಿಕೆಯೊಂದರಲ್ಲಿ ಪೋಪ್ ತಿಳಿಸಿದ್ದಾರೆ.
ತಮ್ಮ ದೇಶದಿಂದ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದ 204 ರೋಹಿಂಗ್ಯ ನಿರಾಶ್ರಿತರನ್ನು ಮಾತನಾಡಿಸಿದಾಗ ಅಲ್ಲಿ ತಮ್ಮ ವಿರುದ್ಧ ಮ್ಯಾನ್ಮಾರ್ ನ ಭದ್ರತಾ ಪಡೆಗಳು ಹಾಗೂ ಅವರ ಜತೆಗಿರುವ ನಾಗರಿಕರು ನಡೆಸುತ್ತಿರುವ ದಬ್ಬಾಳಿಕೆಗಳನ್ನು ಅವರು ವಿವರಿಸಿದ್ದಾರೆ ಎಂದು ಕಳೆದ ವಾರ ಬಿಡುಗಡೆಯಾದ ವಿಶ್ವ ಸಂಸ್ಥೆಯ ವರದಿಯೊಂದರಲ್ಲಿ ಹೇಳಲಾಗಿದೆ.
ಮ್ಯಾನ್ಮಾರ್ ನ ಭದ್ರತಾ ಪಡೆಗಳು ಕೆಲವೊಮ್ಮೆ ಇಡೀ ಗ್ರಾಮಗಳಿಗೇ ಬೆಂಕಿಯಿಕ್ಕಿದ್ದರೆ ಇನ್ನು ಕೆಲವೊಮ್ಮೆ ತಮ್ಮ ಮನೆಗಳಿಂದ ಹೊರಗೋಡುತ್ತಿರುವ ಜನರನ್ನು ಗುಂಡಿಕ್ಕಿ ಸಾಯಿಸಿವೆಯೆಂದು ಆಪಾದಿಸಲಾಗಿದೆ.
ಸೇನೆಯು ಬಹಳಷ್ಟು ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರಗಳನ್ನು ನಡೆಸಿದೆ ಹಾಗೂ ಆಹಾರ ಅಥವಾ ಆಹಾರ ಮೂಲಗಳನ್ನು ಉದ್ದೇಶಪೂರ್ವಕವಾಗಿ ನಾಶಗೊಳಿಸಿವೆಯೆಂಬ ದೂರುಗಳೂ ಇವೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಸುಮಾರು 65,0000 ರೋಹಿಂಗ್ಯ ಮುಸ್ಲಿಮರು ತಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಗೆ ಹೆದರಿಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಮ್ಯಾನ್ಮಾರ್ ನಮಿಲಿಟರಿ ಕಾರ್ಯಾಚರಣೆಯನ್ನು ಮಾನವತೆಯ ವಿರುದ್ಧದ ಅಪರಾಧವೆನ್ನಬಹುದಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿಕೊಂಡಿವೆ.