ವೈದ್ಯನೆಂದು ಹೇಳಿಕೊಂಡು ಮದುವೆ ಪ್ರಸ್ತಾಪವಿಟ್ಟು ಮೋಸ ಮಾಡುತ್ತಿದ್ದ ವಂಚಕನ ಬಂಧನ
ಪತ್ತನಂತಿಟ್ಟ,ಫೆ.9: ವೈದ್ಯನೆಂದು ಹೇಳಿಕೊಂಡು ಮದುವೆಪ್ರಸ್ತಾಪಮುಂದಿಟ್ಟು ಅರ್ಧಕೋಟಿ ರೂಪಾಯಿಯಷ್ಟು ವಂಚನೆ ನಡೆಸಿದ ಯುವಕನನ್ನು ಪತ್ತನಂತಿಟ್ಟ ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಪಾಲೊತ್ ಪೂವತ್ತಿಕಲ್ ಮುಹಮ್ಮದ್ ಶಾಫಿಯೆನ್ನುವಾತ ಬಂಧನಕ್ಕೊಳಗಾದ ಖದೀಮ. ಈತನಿಂದಾಗಿ ಎರಡೂವರೆ ಲಕ್ಷ ರೂಪಾಯಿ ಕಳೆದುಕೊಂಡಿದ್ದ ಕುಲಶೇಖರಪತಿ ಎಂಬಲ್ಲಿನ ಯುವತಿ ನೀಡಿದ ದೂರಿನ ಆಧಾರದಲ್ಲಿ ಶಾಫಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಾ.ಸತೀಶ್‌ರಾಘವನ್ ಎನ್ನುವ ಹೆಸರಿನಲ್ಲಿ ವೈದ್ಯನೆಂದು ತನ್ನನ್ನು ಪರಿಚಯಿಸಿಕೊಂಡು ಮೂವತ್ತರಷ್ಟು ಮಹಿಳೆಯರಿಗೆ ಈತ ವಂಚಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇವರಿಂದ ಈತ ಅರ್ಧಕೋಟಿಯಷ್ಟು ಹಣವನ್ನು ಕಬಳಿಸಿದ್ದಾನೆ.
ನಾಲ್ಕು ತಿಂಗಳ ಹುಡುಕಾಟದಲ್ಲಿ ಶಾಫಿಯನ್ನು ಉಪಾಯವಾಗಿ ಕರೆಯಿಸಿಕೊಂಡು ಡಿವೈಎಸ್ಪಿ ಕೆ.ಐ. ವಿದ್ಯಾಧರನ್, ಸಿಐ ಎ.ಎಸ್. ಸುಶೇಶ್ ಕುಮಾರ್, ಎಸ್ಸೈ ಪುಷ್ಪಕುಮಾರ್ ಬಂಧಿಸಿದ್ದಾರೆ. ಮಹಿಳೆಯರಿಗೆ ವಂಚಿಸಿದ ಹಣದಿಂದ ಈತ ಆಡಂಬರವಾಗಿ ಬದುಕು ನಡೆಸುತ್ತಿದ್ದ. ಈತನ ಕೈಯಲ್ಲಿದ್ದ ಮೂರುವರೆ ಲಕ್ಷ ಹಣ, 1006 ದಿರ್ಹಮ್,ಆಪಲ್ ಸಹಿತ ನಾಲ್ಕು ಮೊಬೈಲ್ ಫೋನ್‌ಗಳು,ವಿವಿಧ ಕಂಪೆನಿಯ 17ಸಿಮ್‌ಕಾರ್ಡ್‌ಗಳು, ಕೆಮರಾ, ವಿವಿಧ ಆಸ್ಪತ್ರೆಯ ಆಫರಿಂಗ್ ಲೆಟರ್‌ಗಳು, ಸೀಲುಗಳು, ಬೆಲೆಬಾಳುವ ವಾಚ್, ಸುಗಂಧದ್ರವ್ಯ, ಬಟ್ಟೆಗಳು, ಎರಡು ಪವನ್‌ನ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತ ಎಲ್ಲ ಮೋಸವನ್ನು ನಕಲಿ ಹೆಸರಿನಲ್ಲಿ ನಡೆಸುತ್ತಿದ್ದ. ಎಸೆಸೆಲ್ಸಿ ಸರ್ಟಿಫಿಕೇಟ್ ಸಹಿತ ಎಲ್ಲವನ್ನೂ ಅತ ನಕಲಿಯಾಗಿ ಮಾಡಿಟ್ಟು ಕೊಂಡಿದ್ದ.ದುಬೈಯ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಡಿಯೊ ಸರ್ಜನ್ ಎಂದು ಈತ ಸ್ವಯಂ ಪರಿಚಯಿಸಿಕೊಳ್ಳುತ್ತಿದ್ದ. ಡಾ.ಸತೀಶ್ ಮೆನನ್ ಎನ್ನುವ ಪ್ರೊಫೈಲ್ ಸೃಷ್ಟಿಸಿ ಮದುವೆ ಸೈಟ್‌ನಲ್ಲಿ ಪೇಯ್ಡಿ ರಿಜಿಸ್ಟ್ರೇಶನ್ ನಡೆಸುವ ಮೂಲಕ ಈತ ವಂಚನೆ ನಡೆಸುತ್ತಿದ್ದ. ಬಿಎಸ್‌ಸಿ ನರ್ಸಿಂಗ್ ಮುಗಿಸಿದ ಯುವತಿಯರು ಈತನ ಬಲೆಗೆ ಬಿದ್ದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಹೀಗೆ ಪರಿಚಯಿತರಾದ ಯುವತಿಯರಿಗೆ ನಿರಂತರ ಫೋನ್ ಮಾಡಿ ಇವರ ಫೋಟೊಗಳನ್ನು ಫೋಲ್ಡರ್ ಮಾಡಿ ಕಂಪ್ಯೂಟರ್‌ನಲ್ಲಿಡುತ್ತಿದ್ದ. ನರ್ಸಿಂಗ್‌ಗೆ ಸಂಬಂಧಿಸಿದ ಎಲ್ಲ ಸಂಶಯಗಳಿಗೆ ಈತ ಪರಿಹಾರ ನೀಡುತ್ತಿದ್ದ. ತನ್ನ ಬಲೆಗೆ ಬಿದ್ದವರನ್ನು ಬೆಂಗಳೂರಿನ ಅದ್ದೂರಿ ಹೊಟೇಲ್ ಕರೆದು ಕೊಂಡು ಹೋಗುತ್ತಿದ್ದ. ಖಾಯಮ್ಮಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ.
ಫೈವ್‌ಸ್ಟಾರ್ ಹೊಟೇಲ್‌ಗಳಲ್ಲೇ ತಂಗುತ್ತಿದ್ದ. ಯುವತಿಯರಿಗೆ ವಂಚಿಸಿದ ಹಣವನ್ನು ಇದಕ್ಕಾಗಿ ಬಳಸುತ್ತಿದ್ದ. ತನ್ನ ಸ್ವಂತ ಖಾತೆಗೆ ಯಾವತ್ತೂ ಈತ ಇಂತಹ ಹಣವನ್ನು ಹಾಕಿರಲಿಲ್ಲ. ಪರಿಚಿತರಾದ ಯುವತಿಯರ ಹೆಸರಿನಲ್ಲಿ ಖಾತೆಗಳು, ಎಟಿಎಂ ಕಾರ್ಡ್, ಮೊಬೈಲ್ ಫೋನ್ ಸಿಮ್‌ಕಾರ್ಡ್ ತೆಗೆದು ಅದನ್ನು ಶಾಫಿಯೇ ಬಳಸುತ್ತಿದ್ದ.
ಎಂಟನೆ ತರಗತಿಯಲ್ಲಿ ಫೈಲಾಗಿದ್ದ ಈತ ನಂತರ ಖಾಸಗಿ ಬಸ್‌ಗಳಲ್ಲಿ ಚಾಲಕ,ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ. ನಂತರ ಕೋಟ್ಟಯಂನಲ್ಲಿ ನರ್ಸಿಂಗ್ ಆ್ಯಂಡ್ ಮಿಡ್‌ವೈಫರಿ ಸರ್ಟಿಫಿಕೇಟ್ ಕೋರ್ಸ್ ಕಲಿತಿದ್ದ. ಆರುವರ್ಷಗಳ ಹಿಂದೆ ಈತ ದುಬೈಗೆ ಹೋಗಿ ಅಲ್ಲಿಒಂದು ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವಾಗ ತನ್ನ ವಂಚನೆಯ ಕಸುಬನ್ನು ಆರಂಭಿಸಿದ್ದ ಎಂದು ವರದಿ ತಿಳಿಸಿದೆ.